ಪಾಕಿಸ್ತಾನದ ಮಾಜಿ ಸೈನಿಕನಿಗೆ ಪದ್ಮಶ್ರೀ; ಕಾರಣ ಇಲ್ಲಿದೆ.
ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎನಿಸಿದ ಪದ್ಮಶ್ರೀ ಪ್ರಶಸ್ತಿಗಳನ್ನು ವಿವರಿಸುವಾಗ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಸೈನಿಕ ಲೆಫ್ಟಿನೆಂಟ್ ಕರ್ನಲ್ ಖಾಸಿ ಸಜ್ಜದ್ ಅಲಿ ಝಹೀರ್ ಅವರ ಹೆಸರೂ ಸೇರಿತ್ತು. 1971ರ ಯುದ್ಧದಲ್ಲಿ ಪ್ರಾಣಾಪಾಯವನ್ನು ಲೆಕ್ಕಿಸದೇ ಭಾರತದ ಗಡಿಯೊಳಗೆ ಆಗಮಿಸಿ ಬಾಂಗ್ಲಾದೇಶದ ವಿಮೋಚನೆಗೆ ನಡೆಸಿದ ಹೋರಾಟವನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಲೆಫ್ಟಿನೆಂಟ್ ಕರ್ನಲ್ ಝಹೀರ್ ಹೆಸರು ಹಲವು ವರ್ಷಗಳಿಂದ ಪರಿಗಣನೆಯಲ್ಲಿ ಇದ್ದರೂ, ಸೇನಾ ವ್ಯವಹಾರಗಳ ಗೌಪ್ಯತೆಯ ಸ್ವರೂಪದ ಹಿನ್ನೆಲೆಯಲ್ಲಿ ಗೌರವಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಪೋಡಿಯಂಗೆ ಆಗಮಿಸಿದಾಗ ಝಹೀರ್ ಹೆಸರು ದಿಢೀರ್ ಮಿಂಚು ಸಂಚಲನಕ್ಕೆ ಕಾರಣವಾಯಿತು. ಭಾರತೀಯ ಗುಪ್ತಚರ ವ್ಯವಸ್ಥೆಗೆ ಮತ್ತು ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಗೆ ನೀಡಿದ ಗಣನೀಯ ಕೊಡುಗೆಗಾಗಿ ಪದ್ಮಶ್ರೀ ಗೌರವ ನೀಡಲಾಗಿದೆ.
ತಮ್ಮ ಜೀವಕ್ಕೆ ಇದ್ದ ಅಪಾಯವನ್ನೂ ಲೆಕ್ಕಿಸದೇ ಲೆಫ್ಟಿನೆಂಟ್ ಕರ್ನಲ್ ಖಾಝಿ ಸಜ್ಜದ್ ಅಲಿ ಝಹೀರ್ ಭಾರತಕ್ಕೆ ನೆರವಾಗಿದ್ದರು. ಸಿಯಾಲ್ ಕೋಟೆಯಲ್ಲಿ ನಿಯೋಜನೆಗೊಂಡಿದ್ದ 20 ವರ್ಷ ವಯಸ್ಸಿನ ಝಹೀರ್, ಹಿಂದಿನ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ಪಾಕಿಸ್ತಾನ ಸೇನೆ ನಡೆಸುತ್ತಿದ್ದ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ನಡುವೆಯೇ ಪಕ್ಕದ ಭಾರತದ ಗಡಿಯೊಳಕ್ಕೆ ಆಗಮಿಸಿದ್ದರು.
ಅವರು ಭಾರತಕ್ಕೆ ಆಗಮಿಸಿದ ತಕ್ಷಣ ಅವರ ಸಂಕಷ್ಟಗಳು ಕೊನೆಗೊಳ್ಳಲಿಲ್ಲ. ಇವರನ್ನು ಪಾಕಿಸ್ತಾನದ ಬೇಹುಗಾರಿಕೆಗಾಗಿಯೇ ಆಗಮಿಸಿದ್ದಾರೆ ಎಂಬ ಸಂದೇಹದಿಂದ ಗಡಿ ಭದ್ರತಾ ಪಡೆ ಅಧಿಕಾರಿಗಳು ಮತ್ತು ಪಠಾಣ್ ಕೋಟದಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದರು. ಆದಾಗ್ಯೂ ಝಹೀರ್ ಅವರು ಪಾಕಿಸ್ತಾನ ಸೇನೆಯ ರಹಸ್ಯ ದಾಖಲೆಗಳನ್ನು ಪ್ರಸ್ತುತಪಡಿಸಿದ ಬಳಿಕ ಅವರನ್ನು ದೆಹಲಿಯ ಸುರಕ್ಷಿತ ಮನೆಯೊಂದಕ್ಕೆ ಕಳುಹಿಸಲಾಗಿತ್ತು. ಆ ಬಳಿಕ ಭಾರತದ ಗುಪ್ತಚರ ಇಲಾಖೆ ಅವರ ಜತೆ ಸಮನ್ವಯ ಸಾಧಿಸಿತ್ತು. ಆ ಬಳಿಕ ಝಹೀರ್ ಬಾಂಗ್ಲಾದೇಶಕ್ಕೆ ತೆರಳಿ, ಪಾಕಿಸ್ತಾನಿ ಪಡೆಗಳನ್ನು ಎದುರಿಸಲು ಮುಕ್ತಿ ಬಹಿನಿ (ಸ್ವಾತಂತ್ರ ಯೋಧರು)ಗಳಿಗೆ ಗೆರಿಲ್ಲಾ ಯುದ್ಧತಂತ್ರಗಳ ಬಗ್ಗೆ ತರಬೇತಿ ನೀಡಿದ್ದರು.
ಇಂದಿಗೂ ಝಹೀರ್ ಅವರನ್ನು ಪಾಕಿಸ್ತಾನ ದ್ವೇಷಿಸುತ್ತಿದೆ. ಝಹೀರ್ ಪ್ರಕಾರ, ಪಾಕಿಸ್ತಾನದಲ್ಲಿ 50 ವರ್ಷಗಳಿಂದ ಗಲ್ಲು ಶಿಕ್ಷೆ ಇವರಿಗಾಗಿ ಕಾಯುತ್ತಿದೆ. ಬಾಂಗ್ಲಾದೇಶದಲ್ಲಿ ಝಹೀರ್ ಅವರಿಗೆ ಬೀರ್ ಪ್ರೊಟಿಕ್ ಶೌರ್ಯ ಪ್ರಶಸ್ತಿ ಮತ್ತು ದೇಶದ ಅತ್ಯುನ್ನತ ಗೌರವವಾದ ಸ್ವದಿಂತ ಪದಕ ನೀಡಿ ಗೌರವಿಸಲಾಗಿದೆ. ಇದೀಗ ಭಾರತ ಕೂಡಾ ಅವರ ಸೇವೆಯನ್ನು ಗೌರವಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದೆ.