ಧ್ವಜಸ್ತಂಭ ದುರ್ಘಟನೆ: ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ಸಾಂತ್ವನ ತುಂಬಿ ೧ಲಕ್ಷ ಪರಿಹಾರ ವಿತರಣೆ
ತುಮಕೂರು : ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರು ತಾಲೂಕಿನ ಕರೀಕೆರೆ ಗ್ರಾಮದ ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸಲು ಹೋಗಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಬಾಲಕ ಚಂದನ್ ಅವರ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಯ ತಾಯಿ ಮತ್ತು ಅಜ್ಜಿಗೆ ಸಾಂತ್ವನ ತುಂಬಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ ತಿಳಿಸಿದರು.
ನಗರದ ಶ್ರೀ ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವನ್ನಪ್ಪಿರುವ ಬಾಲಕನು ಅಜ್ಜಿಗೆ ಒಬ್ಬನೇ ಮೊಮ್ಮಗ ಹಾಗೂ ತಾಯಿಗೆ ಒಬ್ಬನೇ ಮಗನಾಗಿದ್ದ. ಬಾಲಕನನ್ನು ಅಜ್ಜಿ ಕಷ್ಟಪಟ್ಟು ಸಾಕಿ, ಸಲುಹಿದ್ದರು. ತಂದೆಯ ಮುಖವನ್ನೂ ನೋಡದೇ ಇದ್ದ ಬಾಲಕ ಈ ಅನಾಹುತಕ್ಕೆ ಬಲಿಯಾಗಿರುವುದು ದುಂಖ ತಂದಿದೆ ಎಂದರು.
ಬಾಲಕನನ್ನು ಕಳೆದುಕೊಂಡ ಅಜ್ಜಿ, ಅಮ್ಮನ ದುಃಖವನ್ನು ನೀಗಿಸುವ ಶಕ್ತಿಯಿಲ್ಲ.ಆದರೆ, ಸಂಸಾರಕ್ಕೆ ಅವಶ್ಯವಿರುವ ಒಂದಿಷ್ಟು ಸಹಕಾರದ ಹಿನ್ನೆಲೆಯಲ್ಲಿ ಇಲಾಖೆಯಿಂದ ಒಂದು ಲಕ್ಷ ರೂ. ಚೆಕ್ ಕೊಟ್ಟಿದ್ದೇನೆ. ಕುಟುಂಬಸ್ಥರು ಕೆಲಸ ಕೊಡಿಸಿ ಎಂದು ಮನವಿ ತೋಡಿಕೊಂಡಿದ್ದಾರೆ ಈ ಬಗ್ಗೆ ಗಮನಹರಿಸುತ್ತೇನೆ ಎಂದರು.
ಈ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಯಲ್ಲಿಯೂ ಮಾತನಾಡಿದ್ದೇನೆ. ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಉಳಿದoತೆ ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಲಾಗಿದ್ದು, ಆ ಇಬ್ಬರೂ ಯುವಕರನ್ನು ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ಅವರ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೫೦೮ ಶಾಲೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಲಕ ಸಾವನ್ನಪ್ಪಿದ ಘಟನೆ ನಡೆದ ತಕ್ಷಣವೇ ಸಂಬoಧಿಸಿದವರಿಗೆ ಪತ್ರ ಬರೆದಿದ್ದೇನೆ. ಇಂತಹ ಅವಘಡಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು. ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.