ತುಮಕೂರು, ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಒಂದು ದಿನದ ಸಾಂಕೇತಿಕ ಮುಷ್ಕರದ ಅಂಗವಾಗಿ ಸರಕು ಸಾಗಣೆ ಬಂದ್ ಮಾಡಲಾಯಿತು.
ಈವೇಳೆ ಮಾತನಾಡಿದ ತುಮಕೂರು ಜಿಲ್ಲಾ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮುಜ್ಬೀಲ್ ಪಾಷ ಅವರು, ಕೇಂದ್ರ ಸರ್ಕಾರ ರೂಪಿಸುತ್ತಿರುವ ಕಾನೂನುಗಳು ಲಾರಿ ಮಾಲೀಕರಿಗೆ ಸಂಕಷ್ಟವನ್ನುಂಟು ಮಾಡುತ್ತಿದೆ, ದಿನೆದಿನೇ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ಬಾಡಿಗೆ ಸರಕು ಸಾಗಿಸುವುದಕ್ಕೆ ಕಷ್ಟಕರವಾಗಿದ್ದು, ಕೇಂದ್ರ ಸರ್ಕಾರ ದಿನಕ್ಕೊಂದು ಕಾನೂನು ರೂಪಿಸಲಾಗುತ್ತಿದ್ದು, ಇವೇ ಬಿಲ್‍ನಿಂದ ಯಾವ ಉಪಯೋಗವಾಗುತ್ತದೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಇವೇ ಬಿಲ್‍ನಲ್ಲಿ ಸರಿಯಾದ ಸಮಯಕ್ಕೆ ಲಾರಿ ಓಡಿಸಲು ಆಗುವುದಿಲ್ಲ, ಸಮಯಕ್ಕೆ ಹೋಗದೇ ಇದ್ದಲ್ಲಿ ಲಾರಿ ಮಾಲೀಕರು ಹಾಗೂ ಸರಬರಾಜುದಾರರ ಮೇಲೆಯೂ ದಂಡ ವಿಧಿಸಲಾಗುತ್ತದೆ. ದಿನಕ್ಕೆ 200 ಕಿಮಿ ಓಡಾಟಕ್ಕೆ ಅವಕಾಶ ನೀಡಿರುವ ಇವೇ ಕಾನೂನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಲಾರಿ ಮಾಲೀಕರು ವಿಷ ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ರೈತರು ಕಳೆದ ಮೂರು ತಿಂಗಳಿಂದ ಹೋರಾಡುತ್ತಿದ್ದರು, ಸರ್ಕಾರ ಗಮನಿಸುತ್ತಿಲ್ಲ, ಅಚ್ಛೇದಿನ್ ಬರಲಿಲ್ಲ, ಬುಲೆಟ್ ಟ್ರೈನ್ ಬದಲಾಗಿ ಇರುವ ರೈಲುಗಳನ್ನೇ ಮಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮುಂದಿನ ಏಪ್ರಿಲ್‍ನಿಂದ ಜಾರಿಗೆ ತರಲು ಉದ್ದೇಶಿಸಿರುವ ಹಳೆ ವಾಹನಗಳ ರದ್ದುಗೊಳಿಸಿದರೆ ಲಾರಿ ಮಾಲೀಕರು ಎಲ್ಲಿಗೆ ಹೋಗಬೇಕು, ಹಳೆವಾಹನಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದರೆ ವಾಹನಗಳ ಇಂಜಿನ್ ಬದಲಾಯಿಸಲು ಲಾರಿ ಮಾಲೀಕರು ಸಿದ್ಧರಿದ್ದಾರೆ ಅದನ್ನು ಬಿಟ್ಟು ಇಡೀ ವಾಹನವನ್ನೇ ರದ್ದಿಗೆ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸಾಂಕೇತಿಕ ಮುಷ್ಕರದ ಅಂಗವಾಗಿ ಜಾಸ್‍ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದವರಿಗೆ ಪೊಲೀಸರು ಅವಕಾಶ ನಿರಾಕರಿಸಿದರು. ಈ ವೇಳೆ ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಶಕೀಲ್, ಯೂಸೂಫ್, ಪರ್ವೀಜ್, ರಘು, ದಯಾ ಸೇರಿದಂತೆ ಲಾರಿ ಮಾಲೀಕರು ಉಪಸ್ಥಿತರಿದ್ದರು.
Hai