ಒಮೈಕ್ರಾನ್ ಆತಂಕ: ಪ್ರಧಾನಿ ನರೇಂದ್ರ ಮೋದಿ ಯುಎಇ ಭೇಟಿ ಮುಂದೂಡಿಕೆ
ಹೊಸದಿಲ್ಲಿ: ಒಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಹಾಗೂ ಕುವೈಟ್ ಭೇಟಿ ಮುಂದೂಡಲಾಗಿದೆ. ಜನವರಿ 6ರಂದು ಭೇಟಿಗೆ ದಿನಾಂಕ ನಿಗದಿಪಡಿಸಲಾಗಿತ್ತು.
ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೇಟಿಯ ದಿನಾಂಕವನ್ನು ಮರು ನಿಗದಿ ಮಾಡಲಾಗುವುದು ಹಾಗೂ ಈ ಭೇಟಿ ಫೆಬ್ರವರಿ ತಿಂಗಳಿಗೆ ನಿಗದಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 24ರಂದು ಒಮೈಕ್ರಾನ್ ಪ್ರಕರಣ ವರದಿಯಾದ ಬಳಿಕ ಭಾರತದಲ್ಲಿ ಸುಮಾರು 800 ಪ್ರಕರಣಗಳು ವರದಿಯಾಗಿವೆ.
7 ಎಮಿರೇಟ್ಗಳ ಒಕ್ಕೂಟವಾದ ಯುಎಇಯಲ್ಲಿ ಸೋಮವಾರ ಕೊರೋನ ವೈರಸ್ ಸೋಂಕಿನ 1,732 ಹೊಸ ಪ್ರಕರಣಗಳು ವರದಿಯಾಗಿವೆ. ಒಂದು ಸಾವು ಸಂಭವಿಸಿದೆ.
ಅಬುದಾಬಿಯಲ್ಲಿ ಕೋವಿಡ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶ ಪ್ರವೇಶಿಸುವರಿಗೆ ನಿಯಮಗಳನ್ನು ಬಿಗಿಗೊಳಿಸಿದೆ.
ಡಿಸೆಂಬರ್ 30ರಿಂದ ಎಮಿರೇಟ್ಸ್ ಪ್ರವೇಶಿಸುವರು ಲಸಿಕೆ ಪಡೆದುಕೊಂಡ ಬಗ್ಗೆ ತಮ್ಮ ಮೊಬೈಲ್ ಫೋನ್ ನ ಆರೋಗ್ಯ ಆ್ಯಪ್ನಲ್ಲಿ ಹಸಿರು ಸ್ಟೇಟಸ್ ಹಾಗೂ ಲಸಿಕೆ ತೆಗೆದುಕೊಳ್ಳದವರು ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವ ಅಗತ್ಯತೆ ಇದೆ.
ಯುಎಇಯಲ್ಲಿ ಇದುವರೆಗೆ ಕೊರೋನ ಸೋಂಕಿನ 755,000 ಪ್ರಕರಣಗಳು ವರದಿಯಾಗಿವೆ. ಕೊರೋನ ಸೋಂಕಿನಿಂದ 2,160 ಮಂದಿ ಸಾವನ್ನಪ್ಪಿದ್ದಾರೆ. 10,186 ಸಕ್ರಿಯ ಪ್ರಕರಣಗಳು ಇವೆ.