ದೆಹಲಿ ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗ ಪತ್ತೆ
ನವದೆಹಲಿ:ಕೆಂಪುಕೋಟೆಗೆ ದೆಹಲಿ ವಿಧಾನಸಭೆಯಿಂದ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗವನ್ನು ಪತ್ತೆಹಚ್ಚಲಾಗಿದೆ.
ಈ ಬಗ್ಗೆ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಪ್ರತಿಕ್ರಿಯೆ ನೀಡಿದ್ದು, “ವಿಧಾಸಭೆಯಿಂದ ಈ ಸುರಂಗವು ಕೆಂಪುಕೋಟೆಯನ್ನು ಸಂಪರ್ಕಿಸುತ್ತದೆ. ಈ ಸುರಂಗವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಬಳಸುತ್ತಿದ್ದರು” ಎಂದಿದ್ದಾರೆ.
“ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗಿನ ಸುರಂಗ ಮಾರ್ಗದ ಕುರಿತು ಕೇಳಿದ್ದೇನೆ. ಈ ಕುರಿತು ನಾನು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲು ಯತ್ನಿಸಿದ್ದೆ. ಆದರೆ, ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ” ಎಂದು ಹೇಳಿದ್ದಾರೆ.
“ಇದೀಗ ಸುರಂಗದ ಎದುರಿನ ಭಾಗ ಪತ್ತೆಯಾಗಿದೆ. ಈ ಮಾರ್ಗವನ್ನು ಮತ್ತಷ್ಟು ಅಗೆಯುವ ಅಗತ್ಯವಿಲ್ಲ. ಏಕೆಂದರೆ, ಮೆಟ್ರೋ ಯೋಜನೆ ಹಾಗೂ ಒಳಚರಂಡಿಯ ವ್ಯವಸ್ಥೆಯಿಂದಾಗಿ ಸುರಂಗ ಮಾರ್ಗ ನಾಶವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ರಾಜಧಾನಿಯನ್ನು 1912ರಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಿದ ಬಳಿಕ ಕೇಂದ್ರ ಶಾಸಕಾಂಗ ಸಭರಯಾಗಿ ಬಳಸಲಾಗುತ್ತಿದ್ದ ದೆಹಲಿ ಶಾಸಕಾಂಗ ಸಭೆಯನ್ನು 1926ರಲ್ಲಿ ನ್ಯಾಯಾಲಯವಾಗಿ ಪರಿವರ್ತಿಸಲಾಯಿತು. ಬ್ರಿಟಿಷರು ಈ ಸುರಂಗವನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಕರೆತರಲು ಬಳಸುತ್ತಿದ್ದರು” ಎಂದು ತಿಳಿಸಿದ್ದಾರೆ.
“ಇಲ್ಲಿ ಗಲ್ಲುಶಿಕ್ಷೆ ಕೋಣೆ ಇರುವ ಬಗ್ಗೆ ನಮಗೆಲ್ಲರಿಗೂ ತಿಳಿದಿತ್ತು. ಆದರೆ, ಅದನ್ನು ಎಂದಿಗೂ ತೆರೆದಿರಲಿಲ್ಲ. ಈಗ ಈಗ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಕೊಠಡಿಯನ್ನು ತೆರೆದು ಪರಿಶೀಲನೆ ನಡೆಸಲು ತೀರ್ಮಾನಿಸಿದ್ದು, ಆ ಕೊಠಡಿಯನ್ನು ಸ್ವಾತಂತ್ರ್ಯ ಹೋರಾಟಗಾರಿಗೆ ಗೌರವ ಸೂಚಕ ಕೇಂದ್ರವಾಗಿ ಬದಲಾಯಿಸಲು ಇಚ್ಛಿಸುತ್ತೇವೆ” ಎಂದಿದ್ದಾರೆ.
“ಆ ಸ್ಥಳವು ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಹತ್ವದ ಇತಿಹಾಸ ಹೊಂದಿತ್ತು. ಮುಂದಿನ ಸ್ವಾತಂತ್ರ್ಯೋತ್ಸವದ ಸಂದರ್ಭ ಕೊಠಡಿಯನ್ನು ಪ್ರವಾಸಿಗರಿಗಾಗಿ ತೆರೆಯಲು ಉದ್ದೇಶಿಸಲಾಗಿದೆ. ಈಗಾಗಲೇ ಈ ಯೋಜನೆಯ ಕಾರ್ಯ ಆರಂಭವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.