ಹೆಣ್ಣು ಮಕ್ಕಳನ್ನು ರಕ್ಷಿಸಿ- ವಿದ್ಯಾಭ್ಯಾಸ ನೀಡಿ ಎಂದು ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು
ಸಂವಿಧಾನಬದ್ಧವಾಗಿ ಸಮಾಜದ ಎಲ್ಲರಿಗೂ ಸಮಾನ ಅವಕಾಶಗಳು, ಸಮಾನತೆಯ ಹಕ್ಕು ಇದ್ದಾಗಿಯೂ ಸಹ ಸಮಾಜದಲ್ಲಿ ಹೆಣ್ಣು-ಗಂಡೆಂಬ ಅಸಮಾನತೆ, ತಾರತಮ್ಯ, ಭೇದಭಾವವನ್ನು ಇಂದಿಗೂ ಕಾಣತ್ತಿದ್ದೇವೆ. ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿ- ವಿದ್ಯಾಭ್ಯಾಸ ನೀಡುವ ಮೂಲಕ ಗೌರವಯುತವಾಗಿ ಬದುಕಲು ಅವಕಾಶ ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿಂದು ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ಮಹಿಮಾ ಮಾತನಾಡಿ ಭ್ರೂಣದಿಂದ ಗೋರಿಯವರೆಗೂ ಹೆಣ್ಣಿನ ತಾರತಮ್ಯ ನಡೆಯುತ್ತಲೇ ಇದೆ. ಹುಟ್ಟುವ ಮಗು ಹೆಣ್ಣೆಂದು ತಿಳಿದರೆ ಭ್ರೂಣ ಹತ್ಯೆ ಮಾಡಿಬಿಡುತ್ತಾರೆ. ಹೆಣ್ಣುಮಕ್ಕಳು ಜೀವನದಲ್ಲಿ ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಸಾಧನೆ ಮಾಡುವ ಮೂಲಕ ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಬೇಕು. ಇದರಿಂದ ತಾರತಮ್ಯವನ್ನು ಹೋಗಲಾಡಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್ ನಟರಾಜ್ ಮಾತನಾಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಇಲಾಖೆಯಲ್ಲಿ ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ ಉದ್ಯೋಗಿನಿ, ಸಮೃದ್ಧಿ, ಐಸಿಡಿಎಸ್, ಮತ್ತಿತರ ಹಲವಾರು ಕಾರ್ಯಕ್ರಮಗಳು ಜಾರಿಯಲ್ಲಿದ್ದು, ಮಹಿಳೆಯರು ಇವುಗಳ ಪ್ರಯೋಜನ ಪಡೆಯಬೇಕೆಂದು ತಿಳಿಸಿದರಲ್ಲದೆ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಕೇಂದ್ರದ ಯೋಜನೆಯಂತೆ ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೀಕ್ಷಕಿ ಜಾಹ್ನವಿ ಸ್ವಾಗತಿಸಿದರು. ಶಾಂತ ನಿರೂಪಿಸಿದರು. ದಿವ್ಯ ವಂದಿಸಿದರು.