ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ವಝೀರ್ ದಿಲ್ಲಿಯಲ್ಲಿ ಶವವಾಗಿ ಪತ್ತೆ
ಹೊಸದಿಲ್ಲಿ: ಜಮ್ಮು ಹಾಗೂ ಕಾಶ್ಮೀರ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ಸಿಂಗ್ ವಝೀರ್ ಅವರು ಪಶ್ಚಿಮ ದಿಲ್ಲಿಯ ಮೋತಿ ನಗರದಲ್ಲಿರುವ ಫ್ಲಾಟ್ ನಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
67 ವರ್ಷದ ವಝೀರ್ ಅವರ ಮೃತದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿ ಬಸಾಯಿ ದರಾಪುರ ಪ್ರದೇಶದ ಫ್ಲಾಟ್‌ನ ವಾಶ್‌ರೂಂನಲ್ಲಿ ಪತ್ತೆಯಾಗಿದ್ದು, ಫ್ಲಾಟ್ ಅನ್ನು ಅವರ ಪರಿಚಯಸ್ಥ ಹರ್‌ಪ್ರೀತ್ ಸಿಂಗ್ ಬಾಡಿಗೆಗೆ ತೆಗೆದುಕೊಂಡಿದ್ದರು ಎಂದು ಅವರು ಹೇಳಿದರು.
ಜಮ್ಮು-ಕಾಶ್ಮೀರದ ಮಾಜಿ ಎಂಎಲ್‌ಸಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ಸಿಂಗ್ ವಝೀರ್ ಪಶ್ಚಿಮ ದಿಲ್ಲಿಯ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ, ವಝೀರ್ ಇತ್ತೀಚೆಗೆ ದಿಲ್ಲಿಗೆ ಬಂದಿದ್ದರು ಹಾಗೂ ಅಂದಿನಿಂದ ಸಿಂಗ್ ರೊಂದಿಗೆ ಉಳಿದುಕೊಂಡಿದ್ದರು. ತಲೆಮರೆಸಿಕೊಂಡಿರುವ ಸಿಂಗ್ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮುವಿನ ನಿವಾಸಿಯಾದ ವಝೀರ್ ಸೆಪ್ಟೆಂಬರ್ 2 ರಂದು ಕೆನಡಾಕ್ಕೆ ವಿಮಾನದಲ್ಲಿ ಹೋಗಬೇಕಿತ್ತು, ವಝೀರ್ ಬಗ್ಗೆ ಹಲವು ದಿನಗಳಿಂದ ಯಾವುದೇ ಮಾಹಿತಿ ಇಲ್ಲದಿದ್ದಾಗ ಅವರ ಕುಟುಂಬವು ಜಮ್ಮು ಪೊಲೀಸರಿಗೆ ಮಾಹಿತಿ ನೀಡಿ ದಿಲ್ಲಿ ಪೊಲೀಸರನ್ನು ಸಂಪರ್ಕಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.