ಮೈಸೂರು ವಿವಿ ಘಟಿಕೋತ್ಸವ; 20 ಚಿನ್ನದ ಪದಕ ಪಡೆದ ಶಿರಸಿ ಹುಡುಗಿ
ಮೈಸೂರು, ಸೆಪ್ಟೆಂಬರ್ ; ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಊರಿನ ವಿದ್ಯಾರ್ಥಿನಿ ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 20 ಚಿನ್ನದ ಪದಕ ಮತ್ತು 4 ದತ್ತಿ ಬಹುಮಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
20 ಚಿನ್ನದ ಪದಕ ಮತ್ತು 4 ದತ್ತಿ ಬಹುಮಾನಗಳನ್ನು ಪಡೆದ ಚೈತ್ರಾ ನಾರಾಯಣ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದವರು. ರಸಾಯನ ವಿಜ್ಞಾನದ ವಿದ್ಯಾರ್ಥಿನಿಯಾದ ಅವರು ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಶೀಗೆಹಳ್ಳಿ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಚೈತ್ರಾ ತಂದೆ ನಾರಾಯಣ ಹೆಗಡೆ ಕೃಷಿಕರು. ಕಾಲೇಜು ಸಹ ದೂರ, ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಮನೆಯಿಂದ ದೂರುವಿದ್ದುಕೊಂಡೇ ಚೈತ್ರಾ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.
ಶಿರಸಿಯ ಚೈತನ್ಯಾ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ ಚೈತ್ರಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಆಗಮಿಸಿದರು. ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ನಂತರ ರಸಾಯನ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು 20 ಚಿನ್ನದ ಪದಕಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಚೈತ್ರಾ ಮೈಸೂರಿಗೆ ಬಂದಾಗ ಪರಿಚಯದವರು, ಸಂಬಂಧಿಕರು ಯಾರೂ ಇರಲಿಲ್ಲ. ಖಾಸಗಿ ಪಿಜಿಯಲ್ಲಿ ಇದ್ದು ವ್ಯಾಸಂಗ ಮಾಡಿದ್ದಾರೆ. ತಾನು ವ್ಯಾಸಂಗ ಮಾಡಿದ ಯವರಾಜ ಕಾಲೇಜಿನಲ್ಲಿಯೇ ಅತಿಥಿ ಉಪನ್ಯಾಸಕರಾಗಿಯೇ ಕೆಲಸ ಮಾಡುತ್ತಿದ್ದಾರೆ.
ಚಿನ್ನದ ಪದಕ ಪಡೆದಿರುವ ಬಗ್ಗೆ ಮಾತನಾಡಿರುವ ಚೈತ್ರಾ, “ಸೌಲಭ್ಯಗಳು ಇಲ್ಲದ ಊರಿನಿಂದ ಬಂದಿರುವ ಹುಡುಗಿ ನಾನು ಏನಾದರೂ ಸಾಧನೆ ಮಾಡಿ ತೋರಿಸಬೇಕೆಂಬ ಛಲ, ಹಠದಿಂದ ವ್ಯಾಸಂಗ ಮಾಡಿದ್ದೆ. ಪಿಯುಸಿ ಓದುತ್ತಿದ್ದಾಗ ನಮ್ಮ ಊರಿಗೆ ಬೆಳಗ್ಗೆ, ಸಂಜೆ ಮಾತ್ರ ಬಸ್ ಬರುತಿತ್ತು. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ” ಎಂದು ಹೇಳಿದರು.
ಚಿನ್ನ ಭೇಟೆಯಾಡಿದ ವಿದ್ಯಾರ್ಥಿನಿಯರು ಚೈತ್ರಾ ನಾರಾಯಣ ಹೆಗಡೆ ಮಾತ್ರವಲ್ಲ ಚಾಮರಾಜನಗರ ಜಿಲ್ಲೆಯ ತಮ್ಮಡಹಳ್ಳಿ ಗ್ರಾಮದ ರೈತನ ಪುತ್ರಿ ಟಿ. ಎಸ್. ಮಾದಲಾಂಬಿಕೆ ಸ್ನಾತಕೋತ್ತರ ಪದವಿಯಲ್ಲಿ 10 ಚಿನ್ನದ ಪದಕ ಮತ್ತು ನಾಲ್ಕು ನಗದು ಬಹುಮಾನವನ್ನು ಪಡೆದಿದ್ದಾರೆ.