ರೊಹಿಂಗ್ಯಾ ಬಿಕ್ಕಟ್ಟು ಪರಿಹಾರಕ್ಕೆ ಇನ್ನಷ್ಟು ಕ್ರಮ ಅಗತ್ಯ: ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆಗ್ರಹ

ರೊಹಿಂಗ್ಯಾ ಬಿಕ್ಕಟ್ಟು ಪರಿಹಾರಕ್ಕೆ ಇನ್ನಷ್ಟು ಕ್ರಮ ಅಗತ್ಯ: ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆಗ್ರಹ

 

 

ಢಾಕ: ಅಂತರಾಷ್ಟ್ರೀಯ ಸಮುದಾಯವು ಬಾಂಗ್ಲಾದೇಶದೊಂದಿಗೆ ಉತ್ತಮ ಸಹಭಾಗಿತ್ವ ರೂಪಿಸಬೇಕು ಮತ್ತು ರೊಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಮ್ಯಾನ್ಮಾರ್ ನ ಮಿಲಿಟರಿ ಆಡಳಿತಕ್ಕೆ ಲಭಿಸುವ ಆರ್ಥಿಕ ಮೂಲವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಟಾಮ್ ಆ್ಯಂಡ್ರೂಸ್ ಆಗ್ರಹಿಸಿದ್ದಾರೆ.

 

ಬಾಂಗ್ಲಾದೇಶ ಮಾತ್ರ ಈ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ ಮತ್ತು ಹೊರಬಾರದು. ಈ ಬಿಕ್ಕಟ್ಟಿನ ಕಾರಣ ಮತ್ತು ಅದಕ್ಕಿರುವ ಅಂತಿಮ ಪರಿಹಾರ ಬಾಂಗ್ಲಾದಲ್ಲಿಲ್ಲ, ಮ್ಯಾನ್ಮಾರ್‌ನಲ್ಲಿದೆ  ಎಂದು ಮ್ಯಾನ್ಮಾರ್‌ನಲ್ಲಿನ ಮಾನವ ಹಕ್ಕು ಪರಿಸ್ಥಿತಿಯ ಕುರಿತಾದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಆ್ಯಂಡ್ರೂಸ್ ಢಾಕಾದಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

 

ಬಾಂಗ್ಲಾಕ್ಕೆ ಭೇಟಿ ನೀಡಿರುವ ಆ್ಯಂಡ್ರೂಸ್ ರೊಹಿಂಗ್ಯಾ ನಿರಾಶ್ರಿತರು, ಅಂತರಾಷ್ಟ್ರೀಯ ನೆರವು ಏಜೆನ್ಸಿಗಳ ಅಧಿಕಾರಿಗಳು ಹಾಗೂ ಬಾಂಗ್ಲಾದ ಅಧಿಕಾರಿಗಳನ್ನು ಭೇಟಿಯಾಗಿ ದೇಶದಲ್ಲಿ ನಿರಾಶ್ರಿತರ ಬಿಕ್ಕಟ್ಟಿನ ಪರಾಮರ್ಶೆ ನಡೆಸಿದರು. ಮ್ಯಾನ್ಮಾರ್ ಸೇನಾಡಳಿತದ ಮೇಲೆ ಒತ್ತಡ ಹೇರುವ ಜತೆಗೆ, ಈ ಬಿಕ್ಕಟ್ಟಿಗೆ ಅಲ್ಲಿನ ಸೇನಾಡಳಿತವನ್ನು ಜವಾಬ್ದಾರರನ್ನಾಗಿಸುವುದೂ ಸೇರಿದಂತೆ ಸಮಸ್ಯೆಯ ಪರಿಹಾರಕ್ಕೆ ಇನ್ನಷ್ಟು ಬಲಿಷ್ಟ, ಇನ್ನಷ್ಟು ಸಂಘಟಿತ ಅಂತರಾಷ್ಟ್ರೀಯ ಪ್ರಯತ್ನ ನಡೆಸುವ ಬಗ್ಗೆ ಗರಿಷ್ಟಪ್ರಯತ್ನ ಮಾಡಲಿದ್ದೇನೆ. ಅಗತ್ಯಬಿದ್ದರೆ ಮ್ಯಾನ್ಮಾರ್ ಸೇನಾಡಳಿತದ ಆದಾಯ ಮೂಲವನ್ನು ತಡೆಹಿಡಿಯುವ ಬಗ್ಗೆಯೂ ಅಂತರಾಷ್ಟ್ರೀಯ ಸಮುದಾಯ ಮುಂದಡಿ ಇಡಬೇಕಾಗಿದೆ. ಮ್ಯಾನ್ಮಾರ್‌ನಲ್ಲಿ ದೊಡ್ಡ ಸೇನೆಯಿದೆ ಮತ್ತು ಇದರ ನಿರ್ವಹಣೆಗೆ ಸಾಕಷ್ಟು ಆರ್ಥಿಕ ಆದಾಯದ ಅಗತ್ಯವಿದೆ. ಮಿಲಿಟರಿ ಆಡಳಿತದ ಬೊಕ್ಕಸಕ್ಕೆ ಹರಿದು ಬರುವ ಆದಾಯದ ಮೂಲಗಳನ್ನು ಗುರುತಿಸಿ ಅದನ್ನು ತಡೆಯುವ ಮೂಲಕ ಸೇನಾಡಳಿತದ ಮೇಲೆ ಒತ್ತಡ ಹೇರಬಹುದು ಎಂದವರು ಹೇಳಿದ್ದಾರೆ.

 

ತನಗೆ ವಹಿಸಲಾದ ಕಾರ್ಯಯೋಜನೆಯಡಿ ಭೇಟಿಯಾದ ಪ್ರತಿಯೊಬ್ಬ ರೊಹಿಂಗ್ಯಾ ವ್ಯಕ್ತಿಗಳೂ ಸ್ವಯಂಪೇರಣೆಯಿಂದ ಮನೆಗೆ ಮರಳಲು ಬಯಸುತ್ತಿದ್ದಾರೆ. ಸುರಕ್ಷಿತವಾಗಿ ಮತ್ತು ಗೌರವದಿಂದ ಮನೆಗೆ ಮರಳುವುದನ್ನು ಅವರು ಎದುರು ನೋಡುತ್ತಿದ್ದಾರೆ ಎಂದು ಆ್ಯಂಡ್ರೂಸ್ ಹೇಳಿದ್ದಾರೆ.

 

ಮ್ಯಾನ್ಮಾರ್ ನ ಅಲ್ಪಸಂಖ್ಯಾತ ಜನಾಂಗೀಯ ಗುಂಪು ಆಗಿರುವ ರೊಹಿಂಗ್ಯಾ ಸಮುದಾಯದ ಸುಮಾರು 7 ಲಕ್ಷ ಜನ ಆ ದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ 2017ರ ಆಗಸ್ಟ್‌ನಲ್ಲಿ  ನೆರೆದೇಶದ ಬಾಂಗ್ಲಾಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದ ಬಾಂಗ್ಲಾದೇಶದ ಕರಾವಳಿ ಪ್ರದೇಶದ ಬಳಿಯಿರುವ ನಿರಾಶ್ರಿತರ ಶಿಬಿರದಲ್ಲಿ ಇವರು ನೆಲೆ ಕಂಡಿದ್ದಾರೆ. ಆದರೆ ದೇಶದಲ್ಲಿ ಸುಮಾರು 160 ಮಿಲಿಯನ್ ಜನಸಂಖ್ಯೆ ಇರುವುದರಿಂದ ರೊಹಿಂಗ್ಯಾಗಳಿಗೆ ಆಶ್ರಯ ನೀಡುವುದು ಭಾರೀ ಹೊರೆಯಾಗುತ್ತಿದೆ ಎಂದು ಬಾಂಗ್ಲಾ ಸರಕಾರ ಹೇಳುತ್ತಿದೆ.

 

ಕಾನೂನು ಕ್ರಮಕ್ಕೆ ವಿಶ್ವಸಂಸ್ಥೆ ಶಿಫಾರಸು ರೊಹಿಂಗ್ಯಾಗಳ ವಿರುದ್ಧದ ಹಿಂಸಾಚಾರದ ಕುರಿತು 2018ರಲ್ಲಿ ವಿಶ್ವಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ತನಿಖೆಯು ಮ್ಯಾನ್ಮಾರ್ ನ ಉನ್ನತ ಸೇನಾ ಮುಖಂಡರನ್ನು ಜನಾಂಗ ಹತ್ಯೆ, ಯುದ್ಧಾಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇರೆ ಕಾನೂನುಕ್ರಮಕ್ಕೆ ಶಿಫಾರಸು ಮಾಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!