ಮೋದಿ ಭಾರತವನ್ನು ʼಮುಸ್ಲಿಮರ ನರಮೇಧಕ್ಕೆʼ ತಳ್ಳುತ್ತಿದ್ದಾರೆ: ಆಮ್ನೆಸ್ಟಿ ಇಂಟರ್ ನ್ಯಾಶನಲ್ ಪತ್ರಿಕಾ ಹೇಳಿಕೆ
ವಾಷಿಂಗ್ಟನ್: ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಯುಎಸ್‍ಎ, ಜೆನೊಸೈಡ್ ವಾಚ್ ಮತ್ತು ಅಮೆರಿಕಾದ 17 ಮಾನವ ಹಕ್ಕು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದು ನಾಯಕರು ಮುಸ್ಲಿಂ ಸಮುದಾಯದ ವಿರುದ್ಧ ಹಿಂಸೆ ಹಾಗೂ ಹತ್ಯೆಗೆ ಕರೆ ನೀಡಿದ್ದನ್ನು ಈ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿದೆ ಎಂದು ವರದಿಗಳು ಮತ್ತು ಸಂಘಟನೆಯ ಪತ್ರಿಕಾ ಹೇಳಿಕೆ ತಿಳಿಸಿವೆ.
“ಹರಿದ್ವಾರ ದ್ವೇಷ ಭಾಷಣವು ಮುಸ್ಲಿಮರ ಹತ್ಯಾಕಾಂಡಕ್ಕೆ ಪ್ರಚೋದನೆ ನೀಡಿದೆ” ಎಂದು ಜೆನೊಸೈಡ್ ವಾಚ್‍ನ ಅಧ್ಯಕ್ಷ ಡಾ ಗ್ರೆಗರಿ ಸ್ಟಂಟನ್ ಹೇಳಿದ್ದಾರೆ. “ಭಾರತದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಖಂಡಿಸಬೇಕಿತ್ತು, ಆದರೆ ಅವರು ಅದರ ವಿರುದ್ಧ ಮಾತನಾಡಿಲ್ಲ” ಎಂದು ಅವರು ಹೇಳಿದರು.
ನರಮೇಧದ ಹತ್ತು ಪ್ರಕ್ರಿಯೆಗಳು “ಜನರನ್ನು ಪೌರತ್ವದಿಂದ ಹೊರಗಿಡಲು ಪ್ರಯತ್ನಿಸುವ ಮೂಲಕ” ವರ್ಗೀಕರಣದೊಂದಿಗೆ ಪ್ರಾರಂಭವಾಗುತ್ತದೆ. ಗುರಿಯಾಗಲ್ಪಟ್ಟ ಜನರನ್ನು ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಮತ್ತು ಅಪರಾಧಿಗಳು ಎಂದು ಕರೆಯುವುದನ್ನೂ ಇದು ಒಳಗೊಂಡಿರುತ್ತದೆ. ಈ ಭಾಷೆಯನ್ನು ಭಾರತ ಸರ್ಕಾರವು ಮುಸ್ಲಿಮರ ವಿರುದ್ಧ ಬಳಸುತ್ತಿದೆ. ಈ ಧ್ರುವೀಕರಣವು ಎಲ್ಲಾ ಮುಸ್ಲಿಮರ ದ್ವೇಷಕ್ಕೆ ಕಾರಣವಾಗುತ್ತದೆ, ಮತ್ತು ನರಮೇಧದ ತಯಾರಿಯನ್ನು “ನಾವು ಇದೀಗ ನೋಡುತ್ತಿದ್ದೇವೆ.” ಎಂದು ಅವರು ಹೇಳಿದರು.
“ಯುಎಸ್ ಹೊಲೋಕಾಸ್ಟ್ ಮೆಮೋರಿಯಲ್ ಮ್ಯುಸಿಯಂ ಸಂಶೋಧನೆ ಪ್ರಕಾರ ಭಾರತವು ವಿಶ್ವದಲ್ಲಿಯೇ ನರಮೇಧದ ಅಪಾಯ ಎದುರಿಸುತ್ತಿರುವ ಎರಡನೇ ದೇಶವಾಗಿದೆ. ಭಾರತದಲ್ಲಿ ವ್ಯಕ್ತವಾಗುತ್ತಿರುವ ದ್ವೇಷ ಗಂಭೀರ ಮಟ್ಟದ್ದಾಗಿದೆ” ಎಂದು ಸಂಘಟನೆಗಳ ಪತ್ರಿಕಾ ಹೇಳಿಕೆ ತಿಳಿಸಿದೆ.
2002ರ ಗುಜರಾತ್ ಹಿಂಸಾಚಾರ, ಇತ್ತೀಚಿಗೆ ಮುಸ್ಲಿಂ ಮಹಿಳೆಯರನ್ನು ಆನ್‍ಲೈನ್‍ನಲ್ಲಿ ಹರಾಜು ಹಾಕಿದ ಬುಲ್ಲಿ ಬಾಯಿ ಆ್ಯಪ್ ಪ್ರಕರಣವೂ ಸಂಘಟನೆಗಳ ಸಭೆಯಲ್ಲಿ ಚರ್ಚಿಸಲಾಗಿದೆ.