ದೇಶದಲ್ಲಿ ಮಿತಿ ಮೀರಿತು ಕರೋನಾ!ಕರ್ನಾಟಕವೂ ಅಪಾಯದ ಹಂತದಲ್ಲಿ
ಇಂದು ಕುಮಾರಸ್ವಾಮಿಗೆ ಕರೋನಾ ಸೋಂಕು
ಯಡಿಯೂರಪ್ಪ ಕುಟುಂಬಕ್ಕೂ ಕರೋನಾ
ನವದೆಹಲಿ: ದೇಶದಲ್ಲಿ ಕರೋನಾ ಇದೆ ಮೊದಲ ಬಾರಿಗೆ ದಾಖಲೆ ಪ್ರಮಾಣದ ಆತಂಕ ಸೃಷ್ಟಿಸಿದೆ.
ವೈರಸ್ ತನ್ನ ಎಲ್ಲ ಹಿಂದಿನ ದಾಖಲೆಗಳನ್ನು ಮುರಿದು 24 ಗಂಟೆಯಲ್ಲಿ 2,34,692 ಜನಕ್ಕೆ ಸೋಂಕು ತಗುಲಿದ್ದು, 1,341 ಸೋಂಕಿತರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್‍ಗಢ ಮತ್ತು ಕರ್ನಾಟಕ ಹೊಸ ಪ್ರಕರಣಗಳಲ್ಲಿ ಮುಂದಿವೆ.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ1,45,26,609ಕ್ಕೆ ಏರಿಕೆಯಾಗಿದ್ದು, 16,79,740 ಸಕ್ರಿಯ ಪ್ರಕರಣಗಳಿವೆ. ಸಾವನ್ನಪ್ಪಿದವರ ಸಂಖ್ಯೆ 1,75,649ಕ್ಕೆ ಏರಿಕೆಯಾಗಿದೆ. ಇದುವರೆಗೂ 11,99,37,641 ಜನ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ 63,7298 ಕೊರೊನಾ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ 27,360, ದೆಹಲಿ 19,486, ಛತ್ತೀಸ್‍ಗಢ 14,912 ಮತ್ತು ಕರ್ನಾಟಕದಲ್ಲಿ 14,859 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈಗಾಗಲೇ 20ರಿಂದ ಲಾಕ್ ಡೌನ್ ಜಾರಿಗೆ ಚಿಂತನೆ ನಡೆಯುತ್ತಿದೆ.
ಕುಮಾರಸ್ವಾಮಿಗೆ ಕರೋನಾ!
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರೋನಾ ಸೋಂಕು ತಗುಲಿದೆ. ತಮ್ಮ ಕೋವಿಡ್ ವರದಿ ಪಾಸಿಟಿವ್ ಬರುತ್ತಲೇ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿರುವ ಕುಮಾರಸ್ವಾಮಿ ಅವರು, ತಮ್ಮ ಸಂಪರ್ಕಕ್ಕೆ ಬಂದವರು ಕರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಮತ್ತು ಅವರ ಶ್ರೀಮತಿ ಚನ್ನಮ್ಮ ಅವರಿಗೂ ಸೋಂಕು ತಗುಲಿತ್ತು. ಇದೀಗ ಕುಮಾರಸ್ವಾಮಿ ಅವರಿಗೂ ಸೋಂಕು ತಗುಲಿದೆ.
ಯಡಿಯೂರಪ್ಪ ಕುಟುಂಬಕ್ಕೂ ಕರೋನಾ!
ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೂ ಕರೋನಾ ದೃಢಪಟ್ಟ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರು ಚೇತರಿಕೆ ಪಡೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರ ಮೊಮ್ಮಗಳು ಸೌಂದರ್ಯ ಮತ್ತು ಪತಿ ಡಾ.ನಿರಂಜನ್ ಅವರಿಗೂ ಸೋಂಕು ತಗುಲಿದೆ. ಯಡಿಯೂರಪ್ಪನವರು ದಾಖಲಾದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸಾಧ್ಯವಾದಷ್ಟು ಹೊರಗಡೆ ಪ್ರಯಾಣ ಒಂದು ವಾರ ಕಡಿಮೆ ಮಾಡಿ. ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಪಾಡಿ. ಕಷಾಯ ಸೇವಿಸಿ. ಲಸಿಕೆ ಪಡೆಯಿರಿ. ಆತಂಕ ಬೇಡ, ಜಾಗೃತಿ ಮಾಡಿ..!