ತುಮಕೂರು
ಬೇಡಿಕೆಗೆ ಅನುಗುಣವಾದ ಆಮ್ಲಜನಕವನ್ನು ಜಿಲ್ಲೆಗೆ ಪೂರೈಕೆ ಮಾಡಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಸಚಿವರು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು.
ಜಿಲ್ಲೆಗೆ ಅಗತ್ಯವಿರುವಷ್ಟು ಆಮ್ಲಜನಕ ಪೂರೈಕೆಯಾಗುತ್ತಿಲ್ಲ. ಕ್ವಾರಿ-ಕೈಗಾರಿಕೋದ್ಯಮಿಗಳ ಸಹಾಯದಿಂದ ಆಮ್ಲಜನಕ ಸಾಂದ್ರಕಗಳ ಪೂರೈಕೆಯ ನೆರವು ಪಡೆಯಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಕಡಿಮೆಯಾಗುತ್ತಿದೆ. ಗುರಿ ನಿಗಧಿಯಂತೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೊದಲನೇ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ನೀಡಲು 12-16 ವಾರ ಸಮಯ ನಿಗಧಿ ಮಾಡಲಾಗಿದ್ದು, ಆ ಅವಧಿಯವರು (ಪಿರಿಯಡ್ ನವರು)ಜಿಲ್ಲೆಯಲ್ಲಿಲ್ಲ ಎಂದು ಸಚಿವರು ಮಾಹಿತಿ ನೀಡಿದಾಗ, ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ, ಎರಡನೇ ಡೋಸ್ ಗಾಗಿ 12-16ವಾರದವರು ಇಲ್ಲದೇ ಹೋದರೆ 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ಕೊಡಿ ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ಸೇರಿದಂತೆ ಇತರರಿದ್ದರು.