ಲಾಕ್‌ಡೌನ್‌: ಎಲ್ಲೆಡೆ ಪೊಲೀಸರ ದಬ್ಬಾಳಿಕೆ, ಲಾಠಿ ಏಟಿಗೆ ತಲ್ಲಣಿಸಿದ ಶ್ರೀಸಾಮಾನ್ಯ

 

ಕೋವಿಡ್‌ ನಿಯಂತ್ರಿಸಲು ರಾಜ್ಯ ಸರ್ಕಾರ ಸೋಮವಾರದಿಂದ ಜಾರಿಗೊಳಿಸಿರುವ 14 ದಿನಗಳ ಕಠಿಣ ಲಾಕ್‌ಡೌನ್‌ನ ಮೊದಲ ದಿನವೇ ಪೊಲೀಸರು ಕಂಡ ಕಂಡವರ ಮೇಲೆ ಲಾಠಿ ಬೀಸಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು, ರೋಗಿಗಳ ಮೇಲೂ ‘ಲಾಕ್‌ಡೌನ್‌’ ಹೆಸರಿನಲ್ಲಿ ದೌರ್ಜನ್ಯ ನಡೆಸಿದ್ದು, ಪೊಲೀಸರ ವರ್ತನೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

‘ವಾಹನಗಳು ರಸ್ತೆಗೆ ಇಳಿಯದಂತೆ ತಡೆಯಿರಿ’ ಎಂಬ ಸರ್ಕಾರದ ಕಟ್ಟಾಜ್ಞೆಯನ್ನು ಅಕ್ಷರಶಃ ಜಾರಿಗೊಳಿಸುವ ಉಮೇದಿನಲ್ಲಿ ಕೆಲವೆಡೆ ಆಸ್ಪತ್ರೆಗೆ ಹೊರಟವರು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಬಂದವರು, ಕೂಲಿಗೆ ಹೊರಟವರನ್ನೂ ಬೆನ್ನತ್ತಿ ಹೋಗಿ ಹಲ್ಲೆ ನಡೆಸಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಹಾಲು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೂ ಪೊಲೀಸರು ಅಡ್ಡಿಪಡಿಸಿರುವ ಘಟನೆಗಳು ವರದಿಯಾಗಿವೆ.

 

ರಸ್ತೆಯಲ್ಲಿ ಓಡಾಡುವವರು ತಮ್ಮಂತೆ ಮನುಷ್ಯರು, ಕಷ್ಟ ಜೀವಿಗಳು ಎಂಬುದನ್ನೂ ಎಣಿಸದೇ ಹಿಗ್ಗಾಮುಗ್ಗಾ ಥಳಿಸಿ ದಬ್ಬಾಳಿಕೆ ನಡೆಸಿದ ಪೊಲೀಸರ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.

 

ಬೆಳಿಗ್ಗೆ 6 ರಿಂದ 10ರವರೆಗೂ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ದ್ವಿಚಕ್ರ ವಾಹನಗಳಲ್ಲೂ ಸಂಚರಿಸುವುದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ರಸ್ತೆಗೆ ಬಂದವರನ್ನು ಪೊಲೀಸ್‌ ಸಿಬ್ಬಂದಿ ಅಡ್ಡಗಟ್ಟಿ ಥಳಿಸಿ, ವಾಹನ ವಶಕ್ಕೆ ಪಡೆಯುತ್ತಿದ್ದ ದೃಶ್ಯ ರಾಜ್ಯದ ಎಲ್ಲೆಡೆಯೂ ಕಂಡುಬಂತು. ಮಲೆನಾಡು, ಕರಾವಳಿ, ಬಯಲುಸೀಮೆ, ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹತ್ತಾರು ಕಿಲೋಮೀಟರ್‌ ದೂರದ ಪೇಟೆಗಳಿಗೆ ಕಾಲ್ನಡಿಗೆಯಲ್ಲೇ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದರಿಂದ ಜನರು ಹೈರಾಣಾದರು.

 

ಕೆಲವೆಡೆ ನಗರ, ಪಟ್ಟಣಗಳ ಹೊರ ವಲಯದಲ್ಲಿನ ತೆರೆದ ಪ್ರದೇಶದಲ್ಲಿ ಆರಂಭವಾಗಿದ್ದ ತರಕಾರಿ ಮಾರುಕಟ್ಟೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಅಮಾನುಷವಾಗಿ ವರ್ತಿಸಿದ್ದಾರೆ. ತರಕಾರಿ ಮಾರುತ್ತಿದ್ದವರು ಮತ್ತು ಖರೀದಿಸಲು ಬಂದವರ ಮೇಲೆ ಮನಬಂದಂತೆ ಥಳಿಸಿದ್ದಾರೆ. ಲಾಕ್‌ಡೌನ್‌ ಜಾರಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸ್‌ ಮತ್ತು ಗೃಹರಕ್ಷಕ ಸಿಬ್ಬಂದಿಯು ಕಿರಾಣಿ ಅಂಗಡಿಗಳ ವರ್ತಕರು, ಗ್ರಾಹಕರ ಮೇಲೆ ಲಾಠಿ ಬೀಸಿದ ಘಟನೆಗಳೂ ವ್ಯಾಪಕವಾಗಿ ನಡೆದಿವೆ.

 

ಕೋಲಾರದಲ್ಲಿ ಅಗತ್ಯ ವಸ್ತು ಖರೀದಿಗೆ ಬಂದಿದ್ದ ಸ್ಮಿತಾ ಎಂಬ ತೃತೀಯ ಲಿಂಗಿಯ ಮೇಲೆ ಸಬ್‌ ಇನ್‌ಸ್ಪೆಕ್ಟರ್‌ ವೇದಾವತಿ ಎಂಬುವವರು ಹಲ್ಲೆ ನಡೆಸಿ, ತಲೆಗೂದಲು ಹಿಡಿದು ಎಳೆದೊಯ್ಯುತ್ತಿದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ‘ವೈರಲ್‌’ ಆಗಿದೆ.

 

ಹಾವೇರಿಯಲ್ಲೂ ತರಕಾರಿ ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ ಜನರನ್ನು ಅಟ್ಟಾಡಿಸಿ ಹೊಡೆಯುತ್ತಿರುವ ವಿಡಿಯೊ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಶಿವಮೊಗ್ಗ ನಗರ, ಬೆಂಗಳೂರು ಸೇರಿದಂತೆ ಹಲವೆಡೆ ಇಂತಹ ಪ್ರಕರಣಗಳು ನಡೆದಿವೆ.

 

ಸಾವಿರಾರು ವಾಹನ ವಶ: ರಸ್ತೆಗೆ ಇಳಿದಿದ್ದ ಹತ್ತಾರು ಸಾವಿರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ವಾಹನ ಸವಾರರನ್ನು ರಸ್ತೆಯ ಮೇಲೆ ಕೂರಿಸಿದ, ‘ಮತ್ತೊಮ್ಮೆ ರಸ್ತೆಗೆ ಇಳಿಯುವುದಿಲ್ಲ’ ಎಂದು ಪ್ರಮಾಣ ಮಾಡಿಸಿದ ಹಾಗೂ ಬಸ್ಕಿ ಹೊಡೆಸಿದ ಘಟನೆಗಳೂ ನಡೆದಿವೆ.

 

ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ದೂರದ ಪೇಟೆಗಳಿಗೆ ತೆರಳಲು ಸಾಧ್ಯವಾಗದೇ ಜನರು ಅಗತ್ಯ ವಸ್ತುಗಳ ಖರೀದಿಗೂ ಪರದಾಡಿದರು. ಉಡುಪಿ ಜಿಲ್ಲೆಯ ಮಡಾಮಕ್ಕಿ ನಿವಾಸಿ ಗೋವಿಂದ ಎಂಬುವರು 18 ಕಿ.ಮೀ. ದೂರದ ಹೆಬ್ರಿ ಪಟ್ಟಣಕ್ಕೆ ಕಾಲ್ನಡಿಗೆಯಲ್ಲೇ ಹೋಗಿ, ಅಗತ್ಯ ವಸ್ತುಗಳನ್ನು ಖರೀದಿಸಿ ತಂದಿದ್ದಾರೆ. ಇಂತಹ ಹತ್ತಾರು ಘಟನೆಗಳು ಫೇಸ್‌ ಬುಕ್‌, ವಾಟ್ಸ್‌ ಆ್ಯಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿ ಸದ್ದು ಮಾಡುತ್ತಿವೆ.

 

ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ: ಲಾಕ್‌ಡೌನ್‌ ಜಾರಿಯ ಹೆಸರಿನಲ್ಲಿ ಪೊಲೀಸರು ಅತಿರೇಕದಿಂದ ವರ್ತಿಸಿರುವ ಘಟನೆಗಳ ವಿಡಿಯೊಗಳು, ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಸಾವಿರಾರು ಮಂದಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕರ್ನಾಟಕ ಪೊಲೀಸ್‌ ರಾಜ್ಯ ಆಗಿದೆಯೇ’ ಎಂಬ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.

 

ವಾಹನ ನಿರ್ಬಂಧವಿಲ್ಲ ಡಿಜಿಪಿ ಸೂದ್‌ ಸ್ಪಷ್ಟನೆ: ಪೊಲೀಸರ ವರ್ತನೆ ಕುರಿತು ಆಕ್ರೋಶ ಹೆಚ್ಚುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್, ‘ನಗರಗಳಲ್ಲಿ ಸಮೀಪದ ಅಂಗಡಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮೀಪದ ಪೇಟೆಯಿಂದ ದಿನಸಿ, ತರಕಾರಿ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಿ ತರಲು ವಾಹನಗಳ ಬಳಕೆಗೆ ನಿರ್ಬಂಧ ಇಲ್ಲ’ ಎಂದು ತಿಳಿಸಿದ್ದಾರೆ.

 

‘ಈ ಅವಕಾಶವನ್ನು ಜನರು ವಿವೇಚನೆಯಿಂದ ಬಳಸಬೇಕು. ನಿತ್ಯವೂ ಅಂಗಡಿ ಮತ್ತು ಪೇಟೆಗೆ ಹೋಗುವುದಕ್ಕೆ ಪರವಾನಗಿ ಎಂಬುದಾಗಿ ಭಾವಿಸಬಾರದು’ ಎಂದು ಮನವಿ ಮಾಡಿದ್ದಾರೆ.

 

  • ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು “ವಿಜಯ್ ಭಾರತ ಪತ್ರಿಕಾ ಬಳಗದಿಂದ” ಮಾಧ್ಯಮದ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ .

Leave a Reply

Your email address will not be published. Required fields are marked *

You cannot copy content of this page

error: Content is protected !!