ಲಖಿಂಪುರ ಖೇರಿ ಪ್ರಕರಣ: ತನಿಖೆಯ ಮೇಲ್ವಿಚಾರಣೆಗೆ ಜಸ್ಟಿಸ್ ಆರ್.ಕೆ. ಜೈನ್ ಅವರನ್ನು ನೇಮಕ ಮಾಡಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಅಕ್ಟೋಬರ್ 3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿರುವ ಹಿಂಸಾಚಾರ ಘಟನೆಯ ತನಿಖೆಯ ಮೇಲ್ವಿಚಾರಣೆಯನ್ನು ನಡೆಸಲು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ನ ಮಾಜಿ ನ್ಯಾಯಧೀಶರಾದ ಜಸ್ಟಿಸ್ ರಾಕೇಶ್ ಕುಮಾರ್ ಜೈನ್ ಅವರನ್ನು ಸುಪ್ರೀಂಕೋರ್ಟ್ ಬುಧವಾರ ನೇಮಕ ಮಾಡಿ ಆದೇಶಿಸಿದೆ.
ಲಖಿಂಪುರ ಖೇರಿ ಘಟನೆಯಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅಜಯ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಪ್ರತಿಭಟನಾನಿರತ ರೈತರ ಮೇಲೆ ಕಾರು ಚಲಾಯಿಸಿದ ಪರಿಣಾಮ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ.
ತನಿಖೆಯ ಫಲಿತಾಂಶದಲ್ಲಿ “ನ್ಯಾಯ, ಪಾರದರ್ಶಕತೆ ಮತ್ತು ಸಂಪೂರ್ಣ ನಿಷ್ಪಕ್ಷಪಾತವನ್ನು ಖಾತ್ರಿಪಡಿಸಿಕೊಳ್ಳಲು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ .ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.