ಕುವೆಂಪು, ಕನ್ನಡ ಬಾವುಟಕ್ಕೆ ಅವಮಾನ: ರೋಹಿತ್ ಚಕ್ರತೀರ್ಥ ವಜಾಕ್ಕೆ ಆಗ್ರಹ
ಬೆಂಗಳೂರು: ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪು ಹಾಗೂ ಕನ್ನಡದ ಬಾವುಟವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪೋಸ್ಟರ್ ಹಾಗೂ ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಆಗಿದೆ.
”ಇದು ಯಾವುದೇ ಎಡ, ಬಲ ಸಿದ್ದಾಂತದ ಪ್ರಶ್ನೆಯಲ್ಲ. ಇದು ಕನ್ನಡಿಗರೆಲ್ಲರ ಆತ್ಮಾಭಿಮಾನದ ಪ್ರಶ್ನೆ. ನೀವು ಎಡ-ಬಲ, ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಏನೇ ಆಗಿರಿ. ನೀವು ಕನ್ನಡಿಗರಾಗಿದ್ದರೆ ರೋಹಿತ್ ಚಕ್ರತೀರ್ಥ ಎಂಬ ಕುವೆಂಪು ವಿರೋಧಿ, ಕನ್ನಡ ವಿರೋಧಿ, ಕನ್ನಡದ ಬಾವುಟ ವಿರೋಧಿ ವ್ಯಕ್ತಿ ಕನ್ನಡ ಅಭಿವೃದ್ದಿ ಪ್ರಾಧಿಕಾರದಲ್ಲಿ ಮುಂದುವರೆಯಲು ಬಯಸಲ್ಲ. ಇಂತಹ ವ್ಯಕ್ತಿ ಅಧ್ಯಕ್ಷನಾಗಿರೋದನ್ನು ನೀವು ಕನ್ನಡಿಗರಾಗಿದ್ದರೆ ಒಪ್ಪಲ್ಲ. ಹಾಗಾಗಿ ನೀವು ಈ ಹ್ಯಾಶ್ ಟ್ಯಾಗ್ ಬಳಸಿ ಸ್ವಾಭಿಮಾನ ಮೆರೆಯಿರಿ” ಎಂದು ಫೇಸ್ ಬುಕ್ ನಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಮನವಿ ಮಾಡಿಕೊಂಡಿದ್ದಾರೆ.
ರೋಹಿತ್ ಚಕ್ರತೀರ್ಥ ನಾಡ ಕವಿ ಕುವೆಂಪು ಹಾಗೂ ಕನ್ನಡದ ಬಾವುಟವನ್ನು ಅವಮಾನಿಸಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿತ್ತು. ಅದರ ಜೊತೆಗೆ ನಾಡ ಗೀತೆಯನ್ನು ವಿಕೃತವಾಗಿ ಮತ್ತು ವ್ಯಂಗ್ಯವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಮತ್ತೆ ಡಿಲಿಟ್ ಮಾಡಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಕನ್ನಡಪರ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿತ್ತು.
ಸದ್ಯ ಇದೀಗ ರೋಹಿತ್ ಚಕ್ರತೀರ್ಥ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.