ಕೋವಿಡ್ : ಎಲ್ಲ ಪ್ರಯಾಣಿಕರ ತಪಾಸಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಹುಬ್ಬಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಅಂತರರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತಮಾಡುತ್ತಿದ್ದರು.
ಸುಮಾರು 2500 ಅಂತರರಾಷ್ಟ್ರೀಯ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುತ್ತಾರೆ. ಕೆಲವರು ಮಂಗಳೂರು ವಿಮಾನ ನಿಲ್ದಾಣಕ್ಕೂ ಬರುತ್ತಾರೆ. ಕಳೆದ ಬಾರಿಯ ಅನುಭವದ ಮೇರೆಗೆ ಈಗಿನಿಂದಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
*ಕೋವಿಡ್ : ಅನಗತ್ಯ ಆತಂಕ ಬೇಡ* ಜನರು ಕೋವಿಡ್ ಹೊಸ ತಳಿಯ ಕುರಿತು ಅನಗತ್ಯ ವಾಗಿ ಆತಂಕಕ್ಕೆ ಒಳಗಾಗಬಾರದು. ಜನರು ಈಗ ತಾನೇ ಆರ್ಥಿಕವಾಗಿ, ಸಾಮಾಜಿಕ ವಾಗಿ ಸುಧಾರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
*ಡಿಸೆಂಬರ್ 2 ರಂದು ದೆಹಲಿಗೆ*
ಡಿಸೆಂಬರ್ 2 ರಂದು ದೆಹಲಿಗೆ ತೆರಳಲಿದ್ದು, ಆ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿಯಲ್ಲಿರುವ ಕೋವಿಡ್ ಕಾರ್ಯಕರ್ತರು ಲಸಿಕೆ ಪಡೆದು 6 ತಿಂಗಳಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ವೈಜ್ಞಾನಿಕವಾಗಿ ಆಗಿರುವ ಪ್ರಗತಿ ಹಾಗೂ ಕೇಂದ್ರ ಸರ್ಕಾರದ ಶಿಫಾರಸ್ಸುಗಳ ಬಗ್ಗೆ ಚರ್ಚಿಸಲಿರುವುದಾಗಿ ತಿಳಿಸಿದರು.
ಫ್ರಂಟ್ ಲೈನ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವುದು ಸೂಕ್ತ ಎನ್ನುವುದು ತಜ್ಞರ ಅನಿಸಿಕೆ ಕೂಡ ಆಗಿದೆ ಎಂದರು.
ಈಗಾಗಲೇ ಒಂದು ಮಾದರಿಯನ್ನು ಕೇಂದ್ರ ದ ಎನ್.ಸಿ.ಬಿ.ಎಸ್ ಗೆ ಕಳುಹಿಸಲಾಗಿದೆ. ವರದಿ ಬಂದ ಕೂಡಲೇ ಕ್ರಮ ಜರುಗಿಸಲಾಗುವುದು ಎಂದರು. ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಹಾಗೂ ಲಸಿಕೆ ಹಾಕುವುದನ್ನು ತೀವ್ರಗೊಳಿಸಲಾಗಿದೆ.
ವಿದೇಶಿ ಪ್ರಯಾಣಿಕರು ಹಾಗೂ ಕೇರಳ ಜಿಲ್ಲೆಯ ವಿದ್ಯಾರ್ಥಿಗಳ ಪರೀಕ್ಷೆಗೆ ಮುಖ್ಯವಾಗಿ ನಿಗಾ ವಹಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೇರಳದ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ ಅವರೆಲ್ಲರ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಧಾರವಾಡದ ಜಿಲ್ಲೆಯಲ್ಲಿ 306 ಜನರು ಪಾಸಿಟಿವ್ ಬಂದಿದ್ದು, 7 ದಿನಗಳ ನಂತರದ ಪರೀಕ್ಷೆಯಲ್ಲಿ ಇಬ್ಬರು ಮಾತ್ರ ಪಾಸಿಟಿವ್ ಇದ್ದಾರೆ ಎಂದರು.ಯಾರಿಗೂ ತೀವ್ರ ಲಕ್ಷಣಗಳಿಲ್ಲದೇ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು. ಸುಮಾರು 7 ಸಾವಿರ ಜನರಿಗೆ ಈಗಾಗಲೇ ಪರೀಕ್ಷೆ ಮಾಡಿದ್ದು, 500 ಮೀಟರ್ ವ್ಯಾಪ್ತಿಯೊಳಗೆ 1000 ಕ್ಕೂ ಹೆಚ್ಚು ಜನರ ಪರೀಕ್ಷೆ ಮಾಡಲಾಗಿದೆ ಎಂದರು.
*ಕಿರಿಯ ವೈದ್ಯರಿಗೆ ಶಿಷ್ಯವೇತನ*
ಕಿರಿಯ ವೈದ್ಯರು ರಾಜ್ಯಾದ್ಯಂತ ಮುಷ್ಕರ ಮಾಡಲಿರುವ ಬಗ್ಗೆ ಪ್ರಶ್ನಿಸಿದಾಗ ಈಗಾಗಲೇ ಹಣವನ್ನು ಬಿಡುಗಡೆ ಮಾಡಿದೇ. ಕೆಲವು ಕಾಲೇಜುಗಳಲ್ಲಿ ದಾಖಲೆಗಳಿಲ್ಲದೆ ಪಾವತಿಗೆ ತೊಂದರೆಯಾಗಿದೆ. ದಾಖಲೆಗಳಿದ್ದವರಿಗೆ ಕೋವಿಡ್ 19 ಹಾಗೂ ಶಿಷ್ಯವೇತನ ಪಾವತಿಸಲು ಈಗಾಗಲೇ ಸೂಚಿಸಲಾಗಿದೆ. 2-3 ದಿನಗಳಲ್ಲಿ ಎಲ್ಲರಿಗೂ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದರು.
*ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯ*
ಹೊಸ ತಾಲ್ಲೂಕುಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲವೆಂದು ಹೈಕೋರ್ಟ್ ಸರ್ಕಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿ, ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಹೊಸ ತಾಲ್ಲೂಕುಗಳಿಗೆ ಒದಗಿಸಲಾಗುವುದು ಎಂದರು.
*ಬಿ.ಜೆ.ಪಿ ಅಭ್ಯರ್ಥಿ ಆಯ್ಕೆ ನಿಶ್ಚಿತ*
ವಿಧಾನ ಪರಿಷತ್ ಚುನಾವಣೆಯಲ್ಲಿ ಹಾವೇರಿಯಿಂದಲೇ ಬಿಜೆಪಿ ಬಂಡಾಯ ಅಭ್ಯರ್ಥಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅವರು ಬಿಜೆಪಿ ಎನ್ನುತ್ತಾರೆ. ಆಮೇಲೆ ಎಪಿಎಂಸಿ ಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಧ್ಯಕ್ಷರಾಗಿದ್ದರು. ಅವರಿಗೆ ಸ್ಥಿರವಾದ ನಿಲುವಿಲ್ಲ.ಆದರೆ ಅದರಿಂದ ಯಾವ ಪರಿಣಾಮವೂ ಉಂಟಾಗುವುದಿಲ್ಲ. ನಮ್ಮ ಅಭ್ಯರ್ಥಿ ಪ್ರದೀಪ್ ಶೆಟ್ಟರು ಆಯ್ಕೆಯಾಗುವುದು ನಿಶ್ಚಿತ ಎಂದರು.
*ಮೈತ್ರಿ*:
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿರುವ ಬಗ್ಗೆ ಪ್ರಸ್ತಾಪಿಸಿದಾಗ, ದೇವೇಗೌಡರು ಹಾಗೂ ಪ್ರಧಾನಿಗಳು ಹಲವಾರು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದರಲ್ಲಿ ಸ್ಥಳೀಯವಾಗಿ ಮೈತ್ರಿ ಮಾಡಿಕೊಳ್ಳುವುದೂ ಸೇರಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಯವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಗುತ್ತಿಗೆಗಾರರ ಕಮಿಷನ್ ವಿಚಾರದಲ್ಲಿ ತನಿಖೆಯನ್ನು ಪ್ರಧಾನ ಕಾರ್ಯದರ್ಶಿ ಗಳಿಗೆ ವಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ , ಟೆಂಡರ್ ಗೆ ಅನುಮತಿ ನೀಡುವ ಇಂಜಿನಿಯರ್ ಗಳು ಬೇರೆ. ಪ್ರಧಾನ ಕಾರ್ಯದರ್ಶಿ ಗಳು ಮೇಲ್ಮನವಿ ಪ್ರಾಧಿಕಾರವಾಗಿರುವುದರಿಂದ ಅವರಿಗೆ ವಹಿಸಲಾಗಿದೆ ಎಂದರು.