ಕೈಕೊಟ್ಟ ಸ್ಟಾರ್ ಬ್ಯಾಟ್ಸ್‌ಮನ್‌ಗಳು, ಕೆಕೆಆರ್ ಎದುರು ಆರ್‌ಸಿಬಿಗೆ ಹೀನಾಯ ಸೋಲು
ಅಬುಧಾಬಿ: ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ವೈಫಲ್ಯಕ್ಕೆ ಬೆಲೆತೆತ್ತ ಆರ್‌ಸಿಬಿ ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಸೋಲಿನ ಆರಂಭ ಕಂಡಿದೆ. ಜಯೇದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕಡು ನೀಲಿ ಜೆರ್ಸಿಯೊಂದಿಗೆ ಕಣಕ್ಕಿಳಿದ ವಿರಾಟ್ ಕೊಹ್ಲಿ ಸಾರಥ್ಯದ ಬಳಗ 9 ವಿಕೆಟ್‌ಗಳಿಂದ ಕೆಕೆಆರ್ ತಂಡಕ್ಕೆ ಶರಣಾಯಿತು.
ಇದರೊಂದಿಗೆ ಚೆನ್ನೈನಲ್ಲಿ ಮೊದಲ ಹಣಾಹಣಿಯಲ್ಲಿ ಆರ್‌ಸಿಬಿ ಎದುರು ಅನುಭವಿಸಿದ ಸೋಲಿಗೆ ಇವೊಯಿನ್ ಮಾರ್ಗನ್ ತಂಡ ಸೇಡು ತೀರಿಸಿಕೊಂಡಿತು. ಪ್ಲೇಆಫ್ ಹಂತಕ್ಕೇರುವ ಅವಕಾಶ ಕ್ಷೀಣಿಸಿದ್ದರೂ ಸಮಾಧಾನಕರ ಗೆಲುವಿನೊಂದಿಗೆ ಕೆಕೆಆರ್ ಲೀಗ್‌ನಲ್ಲಿ ತನ್ನ ಹೋರಾಟ ಉಳಿಸಿಕೊಂಡಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 19 ಓವರ್‌ಗಳಲ್ಲಿ 92 ರನ್‌ಗಳಿಗೆ ಸರ್ವಪತನ ಕಂಡಿತು. ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ (13ಕ್ಕೆ 3), ಆಲ್ರೌಂಡರ್ ಆಂಡ್ರೆ ರಸೆಲ್ (9ಕ್ಕೆ 3) ಮಾರಕ ದಾಳಿಗೆ ನಲುಗಿದ ಕೊಹ್ಲಿ ಬಳಗ ಐಪಿಎಲ್‌ನಲ್ಲಿ 7ನೇ ಬಾರಿಗೆ 100 ರನ್‌ಗಿಂತ ಕಡಿಮೆ ಮೊತ್ತ ಪೇರಿಸಿತು. ಬಳಿಕ ಈ ಅಲ್ಪ ಮೊತ್ತ ಬೆನ್ನಟ್ಟಿದ ಕೆಕೆಆರ್ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 94 ರನ್‌ಗಳಿಸಿ ಗೆಲುವಿನ ದಡ ಸೇರಿತು.
ಆರ್‌ಸಿಬಿ: 19 ಓವರ್‌ಗಳಲ್ಲಿ 92 (ವಿರಾಟ್ ಕೊಹ್ಲಿ 5, ದೇವದತ್ ಪಡಿಕಲ್ 22, ಕೆಎಸ್ ಭರತ್ 16, ಗ್ಲೆನ್ ಮ್ಯಾಕ್ಸ್‌ವೆಲ್ 10, ಹರ್ಷಲ್ ಪಟೇಲ್ 12, ವರುಣ್ ಚಕ್ರವರ್ತಿ 13ಕ್ಕೆ 3, ಲಾಕಿ ಫರ್ಗ್ಯುಸನ್ 24ಕ್ಕೆ 2, ಆಂಡ್ರೆ ರಸೆಲ್ 9ಕ್ಕೆ 3), ಕೆಕೆಆರ್: 10 ಓವರ್‌ಗಳಲ್ಲಿ 1 ವಿಕೆಟ್‌ಗೆ 94 (ಶುಭಮಾನ್ ಗಿಲ್ 48, ವೆಂಕಟೇಶ್ ಅಯ್ಯರ್ 41*, ಯಜುವೇಂದ್ರ ಚಾಹಲ್ 23ಕ್ಕೆ 1).