ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತುರ್ತು ಕರೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಿದರು.
ಸಿದ್ದರಾಮಯ್ಯ ಅವರಿಗೆ ಶಾಸಕ ಜಮೀರ್ ಅಹಮದ್ ಜೊತೆಯಾಗಿದ್ದರು. ಸಿದ್ದರಾಮಯ್ಯ 6 ಗಂಟೆಯ ವಿಮಾನದಲ್ಲಿ ದೆಹಲಿಗೆ ತೆರಳಿದರೆ, ಡಿ.ಕೆ.ಶಿವಕುಮಾರ್ ಅವರು, 8 ಗಂಟೆ ವಿಮಾನದಲ್ಲಿ ತೆರಳಿದ್ದು, ಈ ವೇಳೆ ಮಾತನಾಡಿದ ಅವರು, ದೆಹಲಿ ಅನ್ನೋದು ನಮಗೆ ಕೇಂದ್ರ ಸ್ಥಳ, ದೇವಸ್ಥಾನವಿದ್ದಂತೆ,ಹೋಗಿ ಬರುತ್ತಿರುತ್ತೇವೆ. ದೇಶದ ವಿಚಾರ, ರಾಜ್ಯದ ವಿಚಾರ ಎಲ್ಲವನ್ನೂ ಚರ್ಚೆ ಮಾಡಿಕೊಂಡು ಬರುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಂದಿನ ಮುಖ್ಯಮಂತ್ರಿಯ ಕೂಗು ಎಲ್ಲೆಡೆ ಕೇಳಿಬರುತ್ತಿದ್ದು, ಇಬ್ಬರು ನಾಯಕರು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಮತ್ತೊಂದು ಕಡೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಮುಂಚೂಣಿಯಲ್ಲಿರುವುದರಿಂದ, ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆಯಾದರೆ ಬಿಜೆಪಿ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಜನರನ್ನು ಪಕ್ಷದ ಕಡೆಗೆ ಸೆಳೆಯಲು ಅನುಸರಿಸಬೇಕಾಗಿರುವ ತಂತ್ರಗಾರಿಕೆ ಹಾಗೂ ರಾಜ್ಯದಲ್ಲಿನ ಲಿಂಗಾಯಿತರ ಮತಗಳನ್ನು ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯಲು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಇಬ್ಬರೂ ನಾಯಕರಿಗೆ ಪಕ್ಷದ ಹೈಕಮಾಂಡ್ ಸೂಚನೆ ನೀಡಬಹುದು ಎನ್ನಲಾಗುತ್ತಿದೆ.
ಮತ್ತೊಂದೆಡೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ.
ಪಕ್ಷದಲ್ಲಿನ ಗುಂಪುಗಾರಿಕೆಯನ್ನು ಬಿಟ್ಟು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು, ಮುಂದಿನ ಮುಖ್ಯಮಂತ್ರಿಯ ವಿಚಾರವನ್ನು ಬಹಿರಂಗವಾಗಿ ಪಕ್ಷದ ಯಾರೋಬ್ಬರೂ ಮಾತನಾಡದೇ ಸಾಮೂಹಿಕವಾಗಿ ಪಕ್ಷದ ಸಂಘಟನೆಯತ್ತ ಗಮನಹರಿಸುವಂತೆ ಪಕ್ಷದ ಹೈಕಮಾಂಡ್ ನಿಂದ ಸೂಚನೆ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಗುರುಮೂರ್ತಿ ಬೂದಿಗೆರೆ
8861100990