ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ಅಭಿಯಾನ’ಕ್ಕೆ ಚಾಲನೆ ನೀಡಿದ ಸಚಿವ ಬಿ.ಸಿ.ನಾಗೇಶ್
ಬೆಂಗಳೂರು, ಸೆ.28: ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಾಯಕ ವರ್ಷದ ಅಭಿಯಾನಗಳ ಸರಣಿ ಬಾರಿಸು ಕನ್ನಡ ಡಿಂಡಿಮವದ ಕೊನೆಯ ಅಭಿಯಾನ ‘ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ಅಭಿಯಾನ–ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮ–2015 ರ ಅನುಷ್ಠಾನ ಕಾರ್ಯಕ್ರಮಕ್ಕೆ ಜಾಲಸಂಪರ್ಕ ಸಭೆಯ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಕಾರ್ಯವನ್ನು ಮೆಚ್ಚಿ, ಇಂದಿನ ಶಿಕ್ಷಣ ವಲಯದಲ್ಲಿ ಆಗುತ್ತಿರುವ ವ್ಯಾಪಕ ಬದಲಾವಣೆ, ಪೋಷಕರ ಮನಸ್ಥಿತಿ, ಶಿಕ್ಷಣ ಸಂಸ್ಥೆಗಳ ಪ್ರತಿಷ್ಠೆಯು ಭವಿಷ್ಯದ ಕನ್ನಡಿಗರ ನಿಜವಾದ ಜ್ಞಾನಾರ್ಜನೆಯನ್ನು ಕಸಿಯುತ್ತಿದೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಉಪ ನಿರ್ದೇಶಕರಿಗೆ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಆದೇಶ ಹೊರಡಿಸುವುದಾಗಿ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಬದುಕಿನ ಭಾಷೆಯಾಗಿದ್ದು, 2015ರಲ್ಲೇ ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮವನ್ನು ಹೊರತಂದಿದ್ದರೂ ಅದರ ಅನುಷ್ಠಾನದ ವಿಷಯದಲ್ಲಿ ಉಂಟಾಗುತ್ತಿರುವ ತೊಡಕುಗಳು ಕನ್ನಡದ ನಾಳೆಗಳಿಗೆ ಧಕ್ಕೆ ಉಂಟು ಮಾಡುತ್ತಿವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಾಜ್ಯಭಾಷಾ ಶಿಕ್ಷಣ ಅಥವಾ ಪ್ರಾಥಮಿಕ ಶಿಕ್ಷಣದ ಕುರಿತು ಆಯಾ ಸ್ಥಳೀಯ ಸರಕಾರಗಳು ಯೋಜಿಸಿ, ನಿರ್ಧರಿಸಲು ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಕರ್ನಾಟಕದಲ್ಲಿ ಕನ್ನಡವೇ ಸರ್ವಕ್ಷೇತ್ರಗಳಲ್ಲೂ ಬದುಕಿನ ಭಾಷೆಯಾಗಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗನ ನಿಲುವಾಗಿರುವುದರಿಂದ ಸರಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಹಕ್ಕೊತ್ತಾಯ ಸಲ್ಲಿಸುವ ಉದ್ದೇಶದಿಂದ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂದು ಚಾಲನೆ ನೀಡಿರುವ ಈ ಅಭಿಯಾನ ಇನ್ನು ಮೂರು ದಿನಗಳ ಕಾಲ ರಾಜ್ಯವ್ಯಾಪಿಯಾಗಿ ಸಾಗುತ್ತಿದ್ದು, ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕನ್ನಡ ಕಾಯಕಪಡೆಯ ಸದಸ್ಯರು, ಎಲ್ಲಾ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಆಯಾ ಜಿಲ್ಲೆಯಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಹಕ್ಕೊತ್ತಾಯ ಮನವಿ ಸಲ್ಲಿಸಿ ಕಡ್ಡಾಯ ಕನ್ನಡ ಅನುಷ್ಠಾನ ಅಧಿನಿಯಮ 2015ರ ಪ್ರತಿಯನ್ನು ಸಲ್ಲಿಸಿ ಭವಿಷ್ಯದ ಕನ್ನಡಿಗರ ಏಳಿಗೆಗಾಗಿ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಲು ಮನವಿ ಮಾಡುವ ಉದ್ದೇಶ ಹೊಂದಿದೆ.
ಜಾಲಸಂಪರ್ಕ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್.ವಿಶಾಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ಎಲ್ಲ ಜಿಲ್ಲೆಗಳ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಭಾಗಿಯಾಗಿದ್ದರು.