ರಾಮನಾಥಪುರ ಗ್ರಾಮದಲ್ಲಿ ಜೆಡಿಎಸ್ ಬೂತ್ ಕಮಿಟಿ ರಚನೆ ಮತ್ತು ಕಾರ್ಯಕರ್ತರ ಸಭೆ

ರಾಮನಾಥಪುರ ಗ್ರಾಮದಲ್ಲಿ ಜೆಡಿಎಸ್ ಬೂತ್ ಕಮಿಟಿ ರಚನೆ ಮತ್ತು ಕಾರ್ಯಕರ್ತರ ಸಭೆ

 

ದೇವನಹಳ್ಳಿ: ಗ್ರಾಮ ಹಂತದಲ್ಲಿ ಪ್ರತಿಯೊಬ್ಬರು ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಗಟ್ಟಿಗೊಳಿಸಬೇಕು. ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕೈ ಬಲಪಡಿಸಲು ಎಲ್ಲರೂ ಒಮ್ಮತದಿಂದ ಶ್ರಮವಹಿಸಬೇಕು ಎಂದು ಜೆಡಿಎಸ್ ಮುಖಂಡ ರಾಮನಾಥಪುರ ಆರ್.ಕೆ.ನಂಜೇಗೌಡ (ಆರ್‌ಎನ್‌ಕೆ) ತಿಳಿಸಿದರು.

 

ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕೊಯಿರ ಗ್ರಾಪಂ ಜೆಡಿಎಸ್ ಬೂತ್ ಕಮಿಟಿ ರಚನೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬೂತ್ ಕಮಿಟಿ ಒಂದು ಗ್ರಾಮದಿಂದ ಬೆಳೆಯಬೇಕು. ಬೂತ್ ಕಮಿಟಿಯ ರಚನೆಯಾದ ನಂತರ ತಟಸ್ಥರಾಗಬಾರದು. ಉತ್ತಮ ಕೆಲಸ ಮಾಡಬೇಕು. ನಮ್ಮ ಕ್ಷೇತ್ರದ ಶಾಸಕರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಸಾಕಷ್ಟು ಕಾಮಗಾರಿಗಳನ್ನು ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಏನೇ ಸಮಸ್ಯೆಯಾದರೂ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡುವವರಾಗಿದ್ದಾರೆ. ಇವರ ಸಾಧನೆಗಳನ್ನು ಮತ್ತು ಅಭಿವೃದ್ಧಿ ಕೆಲಸಗಳನ್ನು ಪ್ರತಿ ಮನೆಬಾಗಿಲಿಗೆ ತಿಳಿಸುವ ಪ್ರಯತ್ನವನ್ನು ಕಾರ್ಯಕರ್ತರು ಮಾಡಬೇಕಿದೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮುಂದಾಗಬೇಕು. ಈಗಿನಿಂದಲೇ ಪಕ್ಷದ ತತ್ವ ಸಿದ್ಧಾಂತಗಳಡಿಯಲ್ಲಿ ಕೆಲಸ ಮಾಡಬೇಕು. ಕಮಿಟಿ ರಚನೆಗೊಂಡ ನಂತರ ಸಕಾಲಕ್ಕೆ ಸಭೆಗಳನ್ನು ಕರೆದು ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

 

ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ಇಳಿ ವಯಸ್ಸಿನಲ್ಲಿಯೂ ಸಹ ಎಚ್.ಡಿ.ದೇವೇಗೌಡ ಅವರು ಸಂಘಟಿತರಾಗಿ ಪಕ್ಷದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರದ ಆಡಳಿತದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂಧಿಸದೆ, ಕೇವಲ ಅಧಿಕಾರದ ಆಸೆಗೆ ಮಣಿಯಾಗಿದ್ದಾರೆ. ಜನರಿಗೆ ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಮನವರಿಕೆ ಮಾಡಬೇಕು. ಯುವ ಕಾರ್ಯಕರ್ತರು ಹಿರಿಯರ ಸಲಹೆ ಮಾರ್ಗದರ್ಶನ ಪಡೆದು ಕಾರ್ಯಕ್ರಮಗಳನ್ನು ರೂಪಿಸಿ, ಪಕ್ಷಾತೀತವಾಗಿ ಯಾರೇ ಸಂಕಷ್ಟದಲ್ಲಿದ್ದರೂ ಸ್ಪಂಧಿಸುವ ಕೆಲಸ ಮಾಡಬೇಕು. ಪಕ್ಷದ ಸಿದ್ದಾಂತ ಮತ್ತು ಶಾಸಕನಾಗಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಪಕ್ಷಕ್ಕೆ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿಸಿ ಜೆಡಿಎಸ್ ಪಕ್ಷವನ್ನು ಬೃಹದಾಕಾರವಾಗಿ ಬೆಳೆಸಬೇಕು. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ರಾಜ್ಯದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಸಮಗ್ರ ಅಭಿವೃದ್ಧಿಗೊಳ್ಳುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಪ್ರತಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮವಹಿಸಿ ನಮ್ಮ ಸರಕಾರದಲ್ಲಿ ಆದಂತಹ ಅಭಿವೃದ್ಧಿ ಕೆಲಸಗಳನ್ನು ಪ್ರತಿ ಜನರಿಗೆ ತಲುಪುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

 

ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಉಪಾಧ್ಯಕ್ಷ ಹನುಮಂತಪ್ಪ, ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ಲಕ್ಷ್ಮಣ್, ರಬ್ಬನಹಳ್ಳಿ ಪ್ರಭಾಕರ್, ಎಚ್.ಭಗವಂತಪ್ಪ, ಮನಗೊಂಡನಹಳ್ಳಿ ಜಗದೀಶ್, ಮುನಿರಾಜು.ಕೆ., ವೆಂಕಟೇಶಪ್ಪ, ಎ.ಎಂ.ಮುನೇಗೌಡ, ಅರುವನಹಳ್ಳಿ ಎ.ಎಂ.ನಾಗರಾಜು, ಜ್ಯೋತಿಪುರ ಮಹೇಶ್‌ಬಾಬು, ವೆಂಕಟೇಶ್‌ಮೂರ್ತಿ, ಕೊಯಿರಾ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!