ಜಂತರ್ ಮಂತರ್ ಕಾರ್ಯಕ್ರಮದಲ್ಲಿ ದ್ವೇಷ ಘೋಷಣೆ: ಆರೋಪಿ ಪ್ರೀತ್ ಸಿಂಗ್‍ಗೆ ಜಾಮೀನು ನಿರಾಕರಣೆ
ಹೊಸದಿಲ್ಲಿ: ರಾಜಧಾನಿಯ ಜಂತರ್ ಮಂತರ್‍ನಲ್ಲಿ ಆಗಸ್ಟ್ 8ರಂದು ಸಮಾನ ನಾಗರಿಕ ಸಂಹಿತೆಗೆ ಬೇಡಿಕೆ ಮುಂದಿಟ್ಟು ಆಯೋಜಿಸಲಾಗಿದ್ದ ಭಾರತ್ ಜೊಡೋ ಆಂದೋಲನ್ ಸಂದರ್ಭ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ ಪ್ರೀತ್ ಸಿಂಗ್ ಎಂಬಾತನಿಗೆ ದಿಲ್ಲಿಯ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿದೆ.
ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ, ದೀಪಕ್ ಸಿಂಗ್, ದೀಪಕ್ ಕುಮಾರ್, ವಿನೋದ್ ಶರ್ಮ ಮತ್ತು ವಿನೀತ್ ಬಾಜಪೇಯಿ ಎಂಬವರ ಜತೆಗೆ ಆಗಸ್ಟ್ 10ರದು ಪ್ರೀತ್ ಸಿಂಗ್‍ನನ್ನು ಬಂಧಿಸಲಾಗಿತ್ತು. ನಂತರ ಇನ್ನೂ ಮೂವರನ್ನು ಈ ಪ್ರಕರಣ ಸಂಬಂಧ ಪೊಲೀಸರು ವಶಪಡಿಸಿಕೊಂಡಿದ್ದರು.
ಪ್ರೀತ್ ಸಿಂಗ್‍ಗೆ ಕಾರ್ಯಕ್ರಮ ಆಯೋಜಕ ಅಶ್ವಿನಿ ಉಪಾಧ್ಯಾಯನ ಪರಿಚಯವಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ತಾನು ಕಾರ್ಯಕ್ರಮ ಆಯೋಜಕನಲ್ಲ ಎಂದು ಸದ್ಯ ಜಾಮೀನಿನ ಮೇಲೆ ಹೊರಗಿರುವ ಉಪಾಧ್ಯಾಯ ವಾದಿಸಿದ್ದಾರೆ.
ಆಗಸ್ಟ್ 12ರಂದು ನ್ಯಾಯಾಲಯ ಪ್ರೀತ್ ಸಿಂಗ್‍ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.