ತುಮಕೂರು: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ಜಲ ಜೀವನ್ ಮಿಷನ್ ಯೋಜನೆ”ಯ ಅನುಷ್ಠಾನ ಮೈಲಿಗಲ್ಲಾಗಬೇಕು. ಗ್ರಾಮಗಳ ಪ್ರತಿ ಮನೆ ಮನೆಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಈ ಯೋಜನೆ ಉದ್ದೇಶ ನೂರರಷ್ಟು ಯಶಸ್ವಿಗೊಳ್ಳಬೇಕು. ಸಕಾಲಕ್ಕೆ ಯೋಜನಾ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಇಂಜಿನಿಯರ್ ಹಾಗೂ ಇಒಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿAದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಡೆದ ಜಲ ಜೀವನ್ ಮಿಷನ್ ಯೋಜನೆ, ಎನ್.ಆರ್.ಡಿ.ಡಬ್ಲೂ÷್ಯ.ಪಿ., ಎಸ್.ಡಿ.ಪಿ., ಎಮ್.ವಿ.ಎಸ್., ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನೀರಿನ ಮೂಲಾಧಾರದ ಮೇಲೆ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸಲು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಒತ್ತು ಕೊಡಬೇಕು. ಈಗಾಗಲೇ ಈ ಯೋಜನೆಯಡಿ ಕಾಮಗಾರಿ ಮುಗಿಸಿರುವ ಗ್ರಾಮಗಳಲ್ಲಿ ನೀರಿನ ಸಂಪರ್ಕ ಕಲ್ಪಿಸಲು ನಳ ಅಳವಡಿಕೆ ಬಿಟ್ಟು ಹೋಗಿರುವ ಮನೆಗಳಿಗೆ ನಳ ಸಂಪರ್ಕವನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ ನಳ ಅಳವಡಿಕೆ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಿ:
ಜಿಲ್ಲೆಯಲ್ಲಿ ನಿರ್ಮಿಸಿರುವ ಎಲ್ಲಾ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಿ, ಮನೆ ಮನೆಗೂ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ವಹಿಸಬೇಕು. ಈ ಕಾರ್ಯ ಇನ್ನೊಂದು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ರಿಪೇರಿಗೆ ಬಂದಿರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ದುರಸ್ಥಿಗೊಳಿಸಬೇಕು ಎಂದು ನಿರ್ದೇಶಿಸಿದರು.
ಸಂಪ್ ನಿರ್ಮಿಸಿ ನೀರು ಒದಗಿಸಿ: ಎಲ್ಲಾ ಓವರ್ ಹೆಡ್ ಟ್ಯಾಂಕ್‌ಗಳ ಬಳಿ ಸಂಪ್ ನಿರ್ಮಿಸಿ, ಆ ಮೂಲಕ ಸ್ವಚ್ಛತೆ ಕಾಪಾಡಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ಈಗಾಗಲೇ ಪ್ರಾರಂಭವಾಗಿರುವ ಓವರ್ ಹೆಡ್ ಟ್ಯಾಂಕ್‌ಗಳ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಪ್ರಸ್ತಾವನೆ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ಟೆಂಡರ್ ಕರೆದು ಕಾಮಗಾರಿಯನ್ನು ಆರಂಭಿಸಿ ಕಾಲಮಿತಿಯೊಳಗೆ ಮುಗಿಸಬೇಕು ಎಂದು ನಿರ್ದೇಶಿಸಿದರು.
ವಿಫಲ ಕೊಳವೆ ಬಾವಿಗಳ ಸ್ಥಿತಿ-ಗತಿ ಕುರಿತು ಅವಲೋಕಿಸಿದ ಸಚಿವರು, ವಿಫಲಗೊಂಡ ಕೊಳವೆ ಬಾವಿಗಳ ಪಂಪ್, ಮೋಟಾರ್, ಕೇಬಲ್ ಸೇರಿದಂತೆ ಇತರೆ ಸಲಕರಣೆಗಳ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು. ವಿಫಲಗೊಂಡ ಕೊಳವೆ ಬಾವಿಗಳ ಸಲಕರಣೆಗಳನ್ನು ಹೊಸ ಕೊಳವೆ ಬಾವಿಗಳಿಗೆ ಬಳಕೆ ಮಾಡಬೇಕು. ಆ ಮೂಲಕ ಹಣ ಉಳಿತಾಯ ಮಾಡಿ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಉಪಯೋಗಿಸಬೇಕು ಎಂದು ಸೂಚನೆ ನೀಡಿದರು.
ಪೈಪ್ ಲೈನ್ ಅಳವಡಿಸಿ: ಓವರ್ ಹೆಡ್ ಟ್ಯಾಂಕ್ ಮೂಲಕ ಈಗಾಗಲೇ ನೀರು ಒದಗಿಸಲು ಪೈಪ್ ಲೈನ್ ಅಳವಡಿಕೆ ಪೂರ್ಣಗೊಂಡಿರುವ ಗ್ರಾಮಗಳಲ್ಲಿ ಬಿಟ್ಟು ಹೋಗಿರುವ ಮನೆಗಳಿಗೆ ಪೈಪ್ ಲೈನ್ ಅಳವಡಿಸಿ ನಳ ಸಂಪರ್ಕಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಶೀಘ್ರ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮಾತನಾಡಿ, ಶೀಘ್ರವಾಗಿ ಕಾಲಮಿತಿಯೊಳಗೆ ಜಲಜೀವನ್ ಮಿಷನ್ ಕಾಮಗಾರಿಯನ್ನು ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಲ ಜೀವನ್ ಮಿಷನ್ ಯೋಜನೆಯ ಗುರಿ ನಿಗಧಿಪಡಿಸಿ ಆ ಮೂಲಕ ಕಾಲಮಿತಿಯೊಳಗೆ ಕಾರ್ಯಾನುಷ್ಠಾನಕ್ಕೆ ತರಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಕಾರಿ ಡಾ.ಕೆ. ವಿದ್ಯಾಕುಮಾರಿ ಅವರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ಕಾರ್ಯಪಾಲಕ ಅಭಿಯಂತರ ಮುತ್ತಪ್ಪ, ಸೇರಿದಂತೆ ವಿವಿಧ ತಾಲ್ಲೂಕಿನ ಇಒ ಹಾಗೂ ಇಂಜಿನಿಯರ್‌ಗಳು ಸಭೆಯಲ್ಲಿ ಉಪಸ್ಥಿತರಿದ್ದರು.