ನ.15ಕ್ಕೆ ಕಾವೇರಿ-ವಗೈ-ಗುಂಡಾರ’ ಜೋಡಣಾ ಕಾಲುವೆಯ ವಿಚಾರಣೆ
ಬೆಂಗಳೂರು_ತಮಿಳುನಾಡು ಸರಕಾರವು ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕುಣತ್ತೂರುವಿನಲ್ಲಿ ನಿರ್ಮಿಸುತ್ತಿರುವ `ಕಾವೇರಿ-ವಗೈ-ಗುಂಡಾರ’ ಜೋಡಣಾ ಕಾಲುವೆಯ ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರಕಾರವು ಸುಪ್ರೀಂ ಕೋರ್ಟ್‍ನಲ್ಲಿ ದಾಖಲಿಸಿರುವ ಮೂಲದಾವೆ ನ.15ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ.
ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಕಟ್ಟಲಾಗಿರುವ ಮಾಯನೂರು ಜಲಾಶಯದಿಂದ ಕಾವೇರಿಯ ಹೆಚ್ಚುವರಿ ನೀರನ್ನು ಗುಂಡಾರಕ್ಕೆ ಕಾಲುವೆಗಳ ಮೂಲಕ ವರ್ಗಾಯಿಸಲು ತಮಿಳುನಾಡು ಯೋಜಿಸಿದೆ. 262 ಕಿ.ಮಿ. ಉದ್ದದ ಈ ಕಾಲುವೆ ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ 2021ರ ಫೆಬ್ರವರಿ ಅರ್ಜಿ ಸಲ್ಲಿಸಿತ್ತು.
ಕಾವೇರಿ ನ್ಯಾಯಾಧೀಕರಣವು ತಮಿಳುನಾಡಿಗೆ ಹಂಚಿಕೆ ಮಾಡಿರುವ 177.25 ಟಿಎಂಸಿ ನೀರನ್ನು ಬಿಳಿ ಗುಂಡ್ಲುವಿನ ಅಂತರ ರಾಜ್ಯ ಮಾಪನ ಕೇಂದ್ರದಲ್ಲಿ ಸುನಿಶ್ಚಿತಗೊಳಿಸಿದ ಮೇಲೆ ಸರಾಸರಿ ವರ್ಷದಲ್ಲಿ ಬಾಕಿ ಉಳಿದ ನೀರು ಕರ್ನಾಟಕಕ್ಕೆ ಸೇರಿದ್ದಾಗಿರುತ್ತದೆ. ಅದರಲ್ಲಿ ಕರ್ನಾಟಕದ ಪಾಲಿನ 284.75 ಟಿಎಂಸಿ ನೀರು ಮತ್ತು ಕಾವೇರಿಯಲ್ಲಿ ಲಭ್ಯವಾಗಬಹುದಾದ 45 ಅಡಿ ಟಿಎಂಸಿ ನೀರು ಕರ್ನಾಟಕಕ್ಕೆ ಸೇರಿದೆಯೆಂಬುದು ಸರ್ವಸಮ್ಮತ ನಿಲುವಾಗಿದೆ ಎಂದು ಕರ್ನಾಟಕವು ವಾದಿಸುತ್ತಿದೆ. ಕರ್ನಾಟಕವು ಮೇಕೆದಾಟು ಬಳಿ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯವನ್ನು ತಮಿಳನಾಡು ವಿರೋಧಿಸುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿವೆ.