ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ
ಹೊಸದಿಲ್ಲಿ: ದೇಶದಲ್ಲಿ ಬುಧವಾರ 13 ಸಾವಿರ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ ಶೇ.44ರಷ್ಟು ಹೆಚ್ಚಳ ಕಂಡಿದೆ. ಕೇವಲ ಎರಡೇ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಸಾಂಕ್ರಾಮಿಕ ದೇಶದಲ್ಲಿ ಆರಂಭವಾದಾಗಿನಿಂದ ಇದುವರೆಗೂ ಇಷ್ಟು ವೇಗವಾಗಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾದ ನಿದರ್ಶನ ಇಲ್ಲ.
ಬುಧವಾರ ತಡರಾತ್ರಿ ವೇಳೆಗೆ ಹೊಸ ಪ್ರಕರಣಗಳ ಸಂಖ್ಯೆ 13,155 ಆಗಿದ್ದು, ಎರಡು ರಾಜ್ಯಗಳಿಂದ ಇನ್ನೂ ಅಂಕಿ ಅಂಶ ಲಭ್ಯವಿಲ್ಲ. ಮಂಗಳವಾರ ದೇಶದಲ್ಲಿ 9155 ಪ್ರಕರಣಗಳು ವರದಿಯಾಗಿದ್ದು, ಇದು ಸೋಮವಾರ ದಾಖಲಾದ 6242 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 47ರಷ್ಟು ಅಧಿಕ.
ಕಳೆದ ಎರಡು ದಿನಗಳಲ್ಲಿ ಪ್ರಕರಣಗಳ ಹೆಚ್ಚಳ ಪ್ರಮಾಣ ಪ್ರತಿ ದಿನ ಶೇಕಡ 40ಕ್ಕಿಂತ ಅಧಿಕ ಇದೆ. ವಾರಾಂತ್ಯದ ಕಾರಣದಿಂದ ಸೋಮವಾರ ಕಡಿಮೆ ಪ್ರಮಾಣದಲ್ಲಿ ಪರೀಕ್ಷೆ ನಡೆದಿದ್ದರೂ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ಎರಡನೇ ಅಲೆಯ ವೇಳೆ ನಿರಂತರ ಎರಡು ದಿನಗಳಲ್ಲಿ ಗರಿಷ್ಠ ಏರಿಕೆ ಪ್ರಮಾಣ ಮಾರ್ಚ್ 31 ಹಾಗೂ ಏಪ್ರಿಲ್ 1ರಂದು ಕ್ರಮವಾಗಿ ಶೇಕಡ 35 ಮತ್ತು ಶೇಕಡ 13.5 ಆಗಿತ್ತು.
ಕಳೆದ ವಾರದವರೆಗೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಪ್ರವೃತ್ತಿ ಕಂಡುಬಂದಿದ್ದು, ಇದೀಗ ದಿಢೀರನೇ ಹೆಚ್ಚಳವಾಗಿದೆ. ಈಶಾನ್ಯ ರಾಜ್ಯಗಳನ್ನು ಹೊರಯುಪಡಿಸಿ ಕನಿಷ್ಠ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 3900ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ದಿನ ದಾಖಲಾದ 2172 ಪ್ರಕರಣಗಳಿಗೆ ಹೋಲಿಸಿದರೆ ಬಹುತೇಕ ಎರಡು ಪಟ್ಟು. ಕಳೆದ 110 ದಿನಗಳಲ್ಲೇ ಇದು ಅತ್ಯಧಿಕ ಏರಿಕೆಯಾಗಿದೆ. ಜೂನ್ 7ರ ಬಳಿಕ ಗರಿಷ್ಠ ಪ್ರಕರಣ ಮಹಾರಾಷ್ಟ್ರದಲ್ಲಿ ಬುಧವಾರ ದಾಖಲಾಗಿದೆ.
ದೆಹಲಿ (923), ಬಂಗಾಳ (1089), ಕರ್ನಾಟಕ (566), ಗುಜರಾತ್ (548), ಜಾರ್ಖಂಡ್ (344), ಹರ್ಯಾಣ (217) ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಿವೆ. ಉತ್ತರ ಪ್ರದೇಶ, ತಮಿಳನಾಡು, ಒಡಿಶಾ, ರಾಜಸ್ಥಾನ, ತೆಲಂಗಾಣ, ಬಿಹಾರ, ಪಂಜಾಬ್ ಮತ್ತು ಗೋವಾದಲ್ಲೂ ಪ್ರಕರಣಗಳು ಹೆಚ್ಚುತ್ತಿವೆ.