ಪುನೀತ್ ನಿಧನದ ಬಳಿಕ ಬೆಂಗಳೂರಿನ ಆಸ್ಪತ್ರೆಗಳಿಗೆ ಹೃದಯ ಚೆಕಪ್‍ಗೆ ಆಗಮಿಸುವವರ ಸಂಖ್ಯೆಯಲ್ಲಿ ಹೆಚ್ಚಳ: ವರದಿ .
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಕನ್ನಡಿಗರನ್ನು ಅದೆಷ್ಟು ತಟ್ಟಿದೆಯೆಂದರೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ಹೃದಯ ಸಂಬಂಧಿ ತಪಾಸಣೆಗಳಿಗೆ ಆಗಮಿಸುವವರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿದೆ ಎಂದು Thenewsminute.com ವರದಿ ಮಾಡಿದೆ.
ಹೃದಯ ಸಂಬಂಧಿ ತಪಾಸಣೆಗೆ ಬರುವವರ ಸಂಖ್ಯೆಯಲ್ಲಿ ಶೇ 30ರಿಂದ ಶೇ 35ರಷ್ಟು ಏರಿಕೆಯಾಗಿದೆ ಎಂದು ಬೆಂಗಳೂರಿನ ಜಯದೇವ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯೋವ್ಯಾಸ್ಕುಲಾರ್ ಸಾಯನ್ಸ್ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಹೇಳಿದ್ದಾರೆ.
ಸಾಮಾನ್ಯವಾಗಿ ಆಸ್ಪತ್ರೆಗೆ ಪ್ರತಿ ದಿನ 1200 ರೋಗಿಗಳು ಹೊರರೋಗಿ ವಿಭಾಗಕ್ಕೆ ಆಗಮಿಸುತ್ತಾರಾದರೆ ನವೆಂಬರ್ 1ರಂದು 1,700 ರೋಗಿಗಳು ಆಗಮಿಸಿದ್ದಾರೆ. ಹೆಚ್ಚಿನವರು ಹೃದಯ ತಪಾಸಣೆಗೆ ಬಂದಿದ್ದು, ಇಸಿಜಿ, ಎಕ್ಸ್-ರೇ, ಇಕೋಕಾರ್ಡಿಯೋಗ್ರಾಂ ಮಾಡಲಾಗುತ್ತಿದೆ. ಕೆಲವರಿಗೆ ಅಗತ್ಯವಿದ್ದರೆ ಟ್ರೆಡ್‍ಮಿಲ್ ಪರೀಕ್ಷೆ ಕೂಡ ನಡೆಸಲಾಗುತ್ತದೆ ಎಂದು ಡಾ. ಮಂಜುನಾಥ್ ಹೇಳಿದ್ದಾರೆ.
ರಾಜಧಾನಿಯ ಅಪೋಲೋ ಆಸ್ಪತ್ರೆಯಲ್ಲಿ ಕೂಡ ಹೃದಯ ತಪಾಸಣೆಗೆ ಆಗಮಿಸುವ ಜನರ ಸಂಖ್ಯೆಯಲ್ಲಿ ಶೇ 30ರಷ್ಟು ಏರಿಕೆಯಾಗಿದೆ. ಪುನೀತ್ ಸಾವಿನ ನಂತರ ಪ್ರತಿ ದಿನ ಆಗಮಿಸುವ ರೋಗಿಗಳ ಸಂಖ್ಯೆಯಲ್ಲಿ 80ರಷ್ಟು ಏರಿಕೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸುತ್ತಾರೆ.
ಪುನೀತ್ ಅವರ ಸಾವಿಗೂ ಮುಂಚೆ ಕೂಡ ಹಲವಾರು ಯುವಜನರು ಹೃದಯಾಘಾತಕ್ಕೆ ಬಲಿಯಾಗಿದ್ದರೂ ಪುನೀತ್ ಒಬ್ಬ ಜನಪ್ರಿಯ ನಾಯಕ ಹಾಗೂ ಫಿಟ್ನೆಸ್‍ಗೆ ಹೆಚ್ಚು ಒತ್ತು ನೀಡುತ್ತಿದ್ದರೂ ಈ ರೀತಿ ಹೃದಯಾಘಾತವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ, ಎಂದು ಹೇಳುವ ವೈದ್ಯರು, ಜನರು ತಾವಾಗಿಯೇ ಹೃದಯ ತಪಾಸಣೆಗೆ ಆಗಮಿಸುತ್ತಿರುವುದು ಉತ್ತಮ ಬೆಳವಣಿಗೆ.