ಪೆಲೆಸ್ತೀನ್ ಅಧ್ಯಕ್ಷ- ಇಸ್ರೇಲ್ ರಕ್ಷಣಾ ಸಚಿವರ ಮಧ್ಯೆ ಸಭೆ
ರಮಲ್ಲಾ, ಆ.30: ಅಪರೂಪದ ವಿದ್ಯಮಾನವೊಂದರಲ್ಲಿ ಇಸ್ರೇಲ್ ರಕ್ಷಣಾ ಸಚಿವರು ಪೆಲೆಸ್ತೀನ್ ಅಧ್ಯಕ್ಷರನ್ನು ಭೇಟಿಯಾಗಿದ್ದು ಉಭಯ ಮುಖಂಡರು ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡರು ಎಂದು ವರದಿಯಾಗಿದೆ. ಆದರೆ ಶಾಂತಿ ಮಾತುಕತೆಯನ್ನು ಪುನರಾರಂಭಿಸುವ ಯಾವುದೇ ಯೋಜನೆ ಸರಕಾರದ ಮುಂದಿಲ್ಲ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಸೋಮವಾರ ಹೇಳಿರುವುದಾಗಿ ಸರಕಾರದ ನಿಕಟಮೂಲಗಳು ಮಾಹಿತಿ ನೀಡಿವೆ.
ಪೆಲೆಸ್ತೀನ್ ಪ್ರಾಂತ್ಯವಾದ ರಮಲ್ಲಾದಲ್ಲಿ ಪೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ರನ್ನು ಇಸ್ರೇಲ್ ರಕ್ಷಣಾ ಸಚಿವ ಬೆನ್ನೀ ಗಾಂಟ್ಸ್ ಭೇಟಿಯಾಗಿದ್ದು ಕಳೆದ 7 ವರ್ಷದಲ್ಲೇ ಉಭಯ ಪಕ್ಷಗಳ ಮುಖಂಡರ ಮಧ್ಯೆ ನಡೆದಿರುವ ಮೊತ್ತಮೊದಲ ನೇರ ಮಾತುಕತೆ ಇದಾಗಿದೆ. ಈ ಸಂದರ್ಭ ಭದ್ರತಾ ಕಾರ್ಯನೀತಿ, ನಾಗರಿಕ ಹಾಗೂ ಆರ್ಥಿಕ ವಿಷಯಗಳಿಗೆ ಸಂಬಂಧಿಸಿ ಚರ್ಚೆ ನಡೆಸಲಾಗಿದೆ ಎಂದು ಇಸ್ರೇಲ್ ಸರಕಾರದ ಮೂಲಗಳು ಹೇಳಿವೆ.
ಅಮೆರಿಕಕ್ಕೆ ಭೇಟಿ ನೀಡಿ ಅಧ್ಯಕ್ಷ ಜೋ ಬೈಡೆನ್ರೊಂದಿಗೆ ಮಾತುಕತೆ ನಡೆಸಿದ್ದ ಬೆನ್ನೀ ಗಾಂಟ್ಸ್, ಅಲ್ಲಿಂದ ನೇರವಾಗಿ ಪೆಲೆಸ್ತೀನ್ಗೆ ತೆರಳಿ ಅಧ್ಯಕ್ಷ ಅಬ್ಬಾಸ್ ರನ್ನು ಭೇಟಿಯಾಗಿದ್ದಾರೆ. ಇಸ್ರೇಲ್ ಹಾಗೂ ಪೆಲೆಸ್ತೀನ್ ಪ್ರಜೆಗಳ ಶಾಂತಿ, ಭದ್ರತೆ, ಸಮೃದ್ಧಿಗಾಗಿ ಮುಂದಿನ ಹೆಜ್ಜೆ ಇರಿಸುವಂತೆ ಬೆನ್ನೀ ಗಾಂಟ್ಸ್ ಗೆ ಸಲಹೆ ನೀಡಿರುವುದಾಗಿ ಬೈಡೆನ್ ಹೇಳಿದ್ದರು. ಪೆಲೆಸ್ತೀನ್ನ ಆರ್ಥಿಕತೆ ಸದೃಢಗೊಳಿಸುವ ಉಪಕ್ರಮಗಳು, ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಪಟ್ಟಿಯಲ್ಲಿ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಇಸ್ರೇಲ್ ಕ್ರಮ ಕೈಗೊಳ್ಳುವುದಾಗಿ ಪೆಲೆಸ್ತೀನ್ ಅಧ್ಯಕ್ಷರಿಗೆ ಭರವಸೆ ನೀಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಪೆಲೆಸ್ತೀನಿಯನ್ ಪ್ರಾಂತ್ಯದಲ್ಲಿ ನಾಗರಿಕರ ವ್ಯವಹಾರದ ಹೊಣೆ ಹೊತ್ತಿರುವ ಇಸ್ರೇಲ್ ಸೇನಾ ವಿಭಾಗದ ಮುಖ್ಯಸ್ಥ ಘಸನ್ ಅಲ್ಯಾನ್, ಪೆಲೆಸ್ತೀನಿಯನ್ ಅಥಾರಿಟಿ(ಪಿಎ)ಯ ಹಿರಿಯ ಅಧಿಕಾರಿ ಹುಸೈನ್ ಅಲ್ಶೇಖ್ ಮತ್ತು ಪೆಲೆಸ್ತೀನಿಯಾದ ಗುಪ್ತಚರ ವಿಭಾಗದ ಮುಖ್ಯಸ್ಥ ಮಜೀದ್ ಫರಾಜ್ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದ. ಸಭೆ ನಡೆದಿರುವುದನ್ನು ಹುಸೈನ್ ಅಲ್ಶೇಖ್ ದೃಢಪಡಿಸಿದ್ದಾರೆ.
ಈ ಮಧ್ಯೆ, ಅಬ್ಬಾಸ್- ಗಾಂಟ್ಸ್ ಮಾತುಕತೆಯನ್ನು ಖಂಡಿಸಿರುವ ಹಮಾಸ್, ಇಂತಹ ಕ್ರಮಗಳು ಪೆಲೆಸ್ತೀನ್ ನ ರಾಜಕೀಯ ಒಡಕನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದಿದೆ.