ಸ್ನೇಹಿತನ ಮನೆಯಲ್ಲಿ ಮಂತ್ರ ಪಠಿಸಿ ದುಷ್ಟಶಕ್ತಿಗಳನ್ನು ಓಡಿಸಿದ್ದೆ” ಎಂದ ಐಐಟಿ ನಿರ್ದೇಶಕ: ವಿವಾದ ಸೃಷ್ಟಿ
ಹೊಸದಿಲ್ಲಿ: ಇತ್ತೀಚೆಗಷ್ಟೇ ಐಐಟಿ ಮಂಡಿ ಇಲ್ಲಿನ ನಿರ್ದೇಶಕರಾಗಿ ನೇಮಕಗೊಂಡಿರುವ ಐಐಟಿ ಕಾನ್ಪುರ್ ಇಲ್ಲಿನ ಪ್ರೊಫೆಸರ್ ಲಕ್ಷ್ಮೀಧರ್ ಬೆಹೆರಾ ಅವರ ವೀಡಿಯೋ ಕ್ಲಿಪ್ ಒಂದು ವಿವಾದಕ್ಕೀಡಾಗಿದೆ. ತಾವು ಮಂತ್ರಗಳ ಪಠನ ಮೂಲಕ ತಮ್ಮ ಸ್ನೇಹಿತನ ಅಪಾರ್ಟ್‍ಮೆಂಟ್ ಹಾಗೂ ಆತನ ಹೆತ್ತವರನ್ನು “ದುಷ್ಟ ಶಕ್ತಿಗಳ” ಬಾಧೆಯಿಂದ ದೂರಗೊಳಿಸಿದ್ದಾಗಿ ಅವರು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಗಿರುವ ಬೆಹೆರಾ ಅವರು ದಿಲ್ಲಿ ಐಐಟಿಯಿಂದ ಪಿಎಚ್ಡಿ ಹಾಗೂ ಜರ್ಮನ್ ಸೆಂಟರ್ ಫಾರ್ ಇನ್ಫಾರ್ಮೇಶನ್ ಟೆಕ್ನಾಲಜಿಯಿಂದ ಪೋಸ್ಟ್ ಡಾಕ್ಟೋರಲ್ ಪದವಿ ಹೊಂದಿದ್ದಾರೆ.
ಈಗ ಹರಿದಾಡುತ್ತಿರುವ ಐದು ನಿಮಿಷ ಅವಧಿಯ ವೀಡಿಯೋದಲ್ಲಿ ಬೆಹೆರಾ ಅವರು ತಾವು 1993ರಲ್ಲಿ ʼದುಷ್ಟ ಶಕ್ತಿಗಳʼ ಬಾಧೆಗೀಡಾಗಿದ್ದ ಸ್ನೇಹಿತನ ಕುಟುಂಬಕ್ಕೆ ಸಹಾಯ ಮಾಡಲೆಂದು ಚೆನ್ನೈಗೆ ಹೋಗಿದ್ದಾಗಿ ವಿವರಿಸಿದ್ದಾರೆ. ವೀಡಿಯೋದಲ್ಲಿ ಅವರು ಭಗವದ್ಗೀತೆಯಲ್ಲಿನ ಜ್ಞಾನವನ್ನು ಕಾರ್ಯರೂಪಕ್ಕೆ ತಂದಿರುವುದಾಗಿ ಹಾಗೂ ʼಹರೇ ರಾಮ ಹರೇ ಕೃಷ್ಣʼ ಮಂತ್ರ ಪಠಿಸಿ ಇದರ ಸಾಮಥ್ರ್ಯವನ್ನು ತೋರಿಸಿ ಸ್ನೇಹಿತನಿಗೆ ಸಹಾಯ ಮಾಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.
“ನನ್ನ ಎರಡು ಸ್ನೇಹಿತರನ್ನು ಕರೆದುಕೊಂಡು ಅಲ್ಲಿಗೆ ರಾತ್ರಿ 7 ಗಂಟೆಗೆ ಹೋದೆ. 10-15 ನಿಮಿಷ ಜೋರಾಗಿ ನಾವು ಪಠಿಸಿದ ನಂತರ, ಗಿಡ್ಡ ವ್ಯಕ್ತಿಯಾಗಿದ್ದ ಹಾಗೂ ನಡೆದಾಡಲೂ ಕಷ್ಟಪಡುತ್ತಿದ್ದ ಸ್ನೇಹಿತನ ತಂದೆ ಭಯಂಕರ ನೃತ್ಯ ಮಾಡಲು ಪ್ರಾರಂಭಿಸಿದ್ದರು ಹಾಗೂ ಅವರ ತಲೆ ಬಹುತೇಕ ಛಾವಣಿಯನ್ನು ಮುಟ್ಟಿತ್ತು. ಪ್ರೇತಾತ್ಮ ಅವರನ್ನು ಸಂಪೂರ್ಣವಾಗಿ ಆವರಿಸಿತ್ತು. ನಂತರ ಸ್ನೇಹಿತನ ತಾಯಿ ಮತ್ತು ಪತ್ನಿಗೂ ಹೀಗೆಯೇ ಆಗಿ ಸುಮಾರು 45 ನಿಮಿಷ ಜೋರಾಗಿ ಮಂತ್ರ ಪಠನೆ ನಂತರ ದುಷ್ಟ ಶಕ್ತಿ ದೂರವಾಯಿತು,” ಎಂದು ಹೇಳಿದ್ದಾರೆ. ಈ ವೀಡಿಯೋ ಬಗ್ಗೆ ಈಗ ಬೆಹೆರಾ ಅವರನ್ನು ಕೇಳಿದಾಗ “ಪ್ರೇತಗಳು ಇವೆ, ಹೌದು” ಆಧುನಿಕ ವಿಜ್ಞಾನ ಎಲ್ಲದಕ್ಕೂ ವಿವರಣೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಏಳು ತಿಂಗಳ ಹಿಂದೆ ಯುಟ್ಯೂಬ್‍ನಲ್ಲಿ `ಲರ್ನ್ ಗೀತಾ, ಲಿವ್ ಗೀತಾ’ ಪುಟದಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿತ್ತು. ಈಗ ಈ ವೀಡಿಯೋವನ್ನು ಪಬ್ಲಿಕ್‍ನಿಂದ ಪ್ರೈವೇಟ್ ಮಾಡಲಾಗಿದೆ.
ಬೆಹೆರಾ ಅವರು ಅತ್ಯಂತ ಧಾರ್ಮಿಕ ವ್ಯಕ್ತಿ ಎಂದೇ ಅವರಿಗೆ ಹತ್ತಿರದವರು ತಿಳಿದಿದ್ದಾರೆ.