ವಿಚಾರಣೆ ಇತ್ಯರ್ಥ ಆಗುವ ತನಕ ಕಾಲೇಜುಗಳಲ್ಲಿ ಕೇಸರಿ ಶಾಲು, ಹಿಜಾಬ್ ಧರಿಸುವಂತಿಲ್ಲ: ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವ ತನಕ ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು, ಹಿಜಾಬ್ ಧರಿಸಿ ಪ್ರವೇಶಿಸುವಂತಿಲ್ಲ ಹಾಗೂ ಧಾರ್ಮಿಕ ಸಂಕೇತದ ಬಾವುಟಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜುಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ದಾಖಲಿಸಲಾಗಿರುವ ಎಲ್ಲ ರಿಟ್ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ಮಹಿಳಾ ನ್ಯಾಯಮೂರ್ತಿ ಖಾಜಿ ಝೈಬುನ್ನೀಸಾ ಮುಹಿಯುದ್ದೀನ್ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಶುಕ್ರವಾರ ಈ ಮಧ್ಯಂತರ ಆದೇಶ ಬಿಡುಗಡೆ ಮಾಡಿದೆ.
“ಭಾರತ ಬಹುತ್ವದ ಜಾತ್ಯತೀತ ದೇಶ. ಕೇವಲ ಒಂದು ಧರ್ಮಕ್ಕೆ ಮಾತ್ರವೇ ಸೀಮಿತವಾದ ಧರ್ಮದ ಆಧಾರದಲ್ಲಿ ಗುರುತಿಸುವಂತಹ ದೇಶವಲ್ಲ. ಬಹುಭಾಷೆ, ಬಹು ಸಂಸೃತಿ, ಬಹು ಧರ್ಮಗಳಿಂದ ಕೂಡಿರುವ ದೇಶವಿದು. ಇಲ್ಲಿ ಪ್ರತಿಯೊಬ್ಬ ನಾಗರಿಕನೂ ತನ್ನಿಚ್ಛೆ ಮತ್ತು ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ತನ್ನ ಧಾರ್ಮಿಕ ಆಚರಣೆಯ ಹಕ್ಕು ಮತ್ತು ಸ್ವಾತಂತ್ರ್ಯ ಹೊಂದಿರುತ್ತಾನೆ. ಆದಾಗ್ಯೂ, ಇವೆಲ್ಲವೂ ಸಂವಿಧಾನದ ಚೌಕಟ್ಟಿನಲ್ಲಿರುವ ನಿರ್ಬಂಧಗಳಿಗೆ ಒಳಪಟ್ಟಿರಬೇಕಾಗುತ್ತದೆ ಎಂಬುದನ್ನು ಮರೆಯಬಾರದು” ಎಂದು ನ್ಯಾಯಪೀಠ ಎಚ್ಚರಿಸಿದೆ.
ಶಾಲಾ-ಕಾಲೇಜುಗಳ ತರಗತಿಯೊಳಗೂ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಆಚರಣೆಯ ಭಾಗ ಎಂಬ ಪ್ರತಿಪಾದನೆಯು, ಸಂವಿಧಾನದ ಆಶಯಕ್ಕೆ ಒಳಪಡುತ್ತದೆಯೇ ಇಲ್ಲವೇ ಎಂಬುದನ್ನು ಆಳವಾಗಿ ಪರೀಕ್ಷಿಸಬೇಕಿದೆ. ಆದ್ದರಿಂದ, ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು, ಧರ್ಮ, ಸಂಸ್ಕ್ರತಿ ಹೆಸರಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗೆ ಹದೆಗೆಡುವಂತಹ ಕಾರ್ಯಕ್ಕೆ ಯಾರೊಬ್ಬರೂ ಮುಂದಾಗಬಾರದು” ಎಂದು ನ್ಯಾಯಪೀಠ ತಾಕೀತು ಮಾಡಿದೆ.