ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಬಲೆ: ಹೆಚ್.ಡಿ.ಕುಮಾರಸ್ವಾಮಿ ಆರೋಪ

ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಬಲೆ: ಹೆಚ್.ಡಿ.ಕುಮಾರಸ್ವಾಮಿ ಆರೋಪ

 

 

ರಾಮನಗರ: ದಿವಂಗತ ಎಂಸಿ ಮನಗೂಳಿ ಅವರು ತಮ್ಮ ಮಕ್ಕಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ತಮ್ಮ ಮನೆಗೆ ಬಂದು ಕೇಳಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ತೀವ್ರ ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿಂದು ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮಗಳ ಮುಂದೆ ತಮ್ಮ ಬೇಸರ ಹೊರಹಾಕಿದ ಅವರು, “ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು. ಅವರಿಗೆ ಜನರೇ ಉತ್ತರ ನೀಡುತ್ತಾರೆ. ಮನಗೂಳಿ ಅವರು ಡಿ.ಕೆ.ಶಿವಕುಮಾರ್ ಮನೆಗಷ್ಟೇ ಏಕೆ?, ಅವರ ಹತ್ತಿರ‌ಕ್ಕೂ ಹೋಗಿರಲಿಲ್ಲ. ಅವರ ಮಗ ಹೋಗಿ ಭೇಟಿ ಮಾಡಿರಬಹುದು” ಎಂದರು.

ಶಿವಮೊಗ್ಗದ ನಾಯಕರೊಬ್ಬರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ವರ್ಷಾನುಗಟ್ಟಲೆ ಅವರ ಮನೆ ಮುಂದೆ ಬಲೆ ಹಾಕಿಕೊಂಡು ಕೂತಿದ್ದೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದರು. ಅವರು ಜೆಡಿಎಸ್‌ ನಾಯಕರ ಮನೆ ಮುಂದೆ ಈಗಲೂ ಬಲೆ ಹಾಕಿಕೊಂಡು ಕೂತಿದ್ದಾರೆ ಎಂದು ಹೆಚ್‌ಡಿಕೆ ಕಟುವಾಗಿ ಟೀಕಿಸಿದರು.

ಮುಂದೆ ಆ ಬಲೆಯೇ ಕಾಂಗ್ರೆಸ್‌ ನಾಯಕರಿಗೆ ದೊಡ್ಡ ಮುಳುವಾಗಲಿದೆ. ಎಲ್ಲವನ್ನೂ ಕಾಲವೇ ನಿರ್ಣಯ ಮಾಡಲಿದೆ, ನೋಡೋಣ ಎಂದು ಮಾರ್ಮಿಕವಾಗಿ ಅವರು ಉತ್ತರ ನೀಡಿದರು.

16ರಿಂದ ಉಪ ಚುನಾವಣೆ ಪ್ರಚಾರ:

ಅಕ್ಟೋಬರ್ 16ರಿಂದ ನಾನು ಉಪ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಸಿಂಧಗಿ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಹಾನಗಲ್ ಕ್ಷೇತ್ರದಲ್ಲೂ ಜೆಡಿಎಸ್ ಪರ ಅಲೆ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕಾಂಗ್ರೆಸ್‌ಪಕ್ಷವನ್ನು ಸೋಲಿಸಲು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ನೀಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರಿಗೆ ಈಗಲೇ ಸೋಲಿನ ಭಯ ಕಾಡುತ್ತಿದೆ. ನಮಗೆ ಅನುಕೂಲವಾದ ಅಭ್ಯರ್ಥಿಯನ್ನು ನಾವು ಹಾಕಿದ್ದೇವೆ ಎಂದರು.

ಸಿಂಧಗಿ ಕ್ಷೇತ್ರದಲ್ಲಿ ಮೊನ್ನೆ ನಮ್ಮ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ಅವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜನರೇ 50 ಸಾವಿರ ರೂಪಾಯಿ ಸಂಗ್ರಹ ಮಾಡಿ ಚುನಾವಣೆಯ ಖರ್ಚಿಗೆ ನೀಡಿದ್ದಾರೆ. ಇದು ಜನರು ನಮ್ಮ ಪಕ್ಷದ ಮೇಲೆ ಇಟ್ಟಿರುವ ಪ್ರೀತಿ. ನಾನು ಮುಖ್ಯಮಂತ್ರಿ ಆಗಿದ್ದಾಗ ಗುತ್ತಿ ಬಸವಣ್ಣ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆ. ಆ ಭಾಗದ ರೈತರು ಈ ಯೋಜನೆಗಾಗಿ ಅನೇಕ ವರ್ಷ ಹೋರಾಟ ಮಾಡಿದ್ದರು. ಜನಸೇವೆ ಮಾಡಿದರೆ ಅವರು ನಮ್ಮನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಅವರು ಭಾವುಕಾರಾಗಿ ನುಡಿದರು.

 

ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿದ್ದು, ಗೆಲುವು ಆ ಪಕ್ಷಕ್ಕೆ ಗಗನಕುಸುಮ. ಕಳೆದ 15 ವರ್ಷಗಳಿಂದ  ಅಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಫೈಟ್ ಇದೆ. ಇದು ಗೊತ್ತಿದ್ದೇ ಕಾಂಗ್ರೆಸ್‌ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋದ ಮನಗೂಳಿ ಅವರ ಪುತ್ರನನ್ನು ಅಭ್ಯರ್ಥಿ ಮಾಡಿದೆ. ಇದಕ್ಕಿಂತ ದೊಡ್ಡ ದಾರಿದ್ರ್ಯ ಆ ಪಕ್ಷಕ್ಕೆ ಏನಿದೆ ಎಂದರು.

ಸಿಂಧಗಿಯಲ್ಲಿ ಜೆಡಿಎಸ್ ಪಕ್ಷವು ಸುಸಂಸ್ಕೃತ ಹೆಣ್ಣು ಮಗಳಿಗೆ ಟಿಕೆಟ್‌ನೀಡಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿರುವ ಕುಟುಂಬದ ಹೆಣ್ಣುಮಗಳು ಅವರು. ಜತೆಗೆ, ಎಂ.ಎ ಪಧವೀಧರೆ ಕೂಡ. ಹಾನಗಲ್‌ಕ್ಷೇತ್ರದಲ್ಲಿ ಎಂ.ಟೆಕ್‌ಮಾಡಿರುವ ನಿಯಾಜ್‌ಶೇಖ್‌ಎಂಬ ಯುವಕನಿಗೆ ಟಿಕೆಟ್‌ಕೊಟ್ಟಿದ್ದೇವೆ. ಅಂಥ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!