ಕಾಬೂಲ್ ಗುರುದ್ವಾರದಲ್ಲಿ ಆಶ್ರಯ ಪಡೆದಿರುವ 260ಕ್ಕೂ ಹೆಚ್ಚು ಸಿಖ್ಖರ ಸ್ಥಳಾಂತರಕ್ಕೆ ನೆರವು ಯಾಚನೆ
ಕಾಬೂಲ್: ಕಾಬೂಲ್ ನ ಕರ್ತೆಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಪಡೆದಿರುವ 260ಕ್ಕೂ ಹೆಚ್ಚು ಸಿಖ್ ಸಮುದಾಯದವರು ತಮ್ಮನ್ನು ಅಫ್ಗಾನ್ನಿಂದ ತೆರವುಗೊಳಿಸಲು ನೆರವು ಯಾಚಿಸಿದ್ದಾರೆ ಎಂದು ಅಮೆರಿಕದಾದ ಸಿಖ್ ಸಂಘಟನೆಯೊಂದು ಹೇಳಿದೆ. 50ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರನ್ನೊಳಗೊಂಡ 260 ಮಂದಿಯ ಸಿಖ್ ಗುಂಪು ಕರ್ತೆಪರ್ವಾನ್ ಗುರುದ್ವಾರದಲ್ಲಿ ಅತಂತ್ರಸ್ಥಿತಿಯಲ್ಲಿದ್ದಾರೆ. ಇದರಲ್ಲಿ ಶನಿವಾರವಷ್ಟೇ ಜನಿಸಿದ ನವಜಾತ ಶಿಶುವೂ ಇದೆ ಎಂದು ಅಮೆರಿಕದ ಯುನೈಟೆಡ್ ಸಿಖ್ಸ್ ಸಂಘಟನೆ ಹೇಳಿಕೆ ನೀಡಿದೆ.
ಇದುವರೆಗೆ ಅಫ್ಗಾನ್ ಸಿಖ್ಖರ ಸ್ಥಳಾಂತರಕ್ಕೆ ಭಾರತ ಮಾತ್ರ ಕೈಜೋಡಿಸಿದೆ. ಈಗ ನೆರವು ಕೋರಿ ಅಮೆರಿಕ, ಕೆನಡಾ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ತಜಿಕಿಸ್ತಾನ್, ಇರಾನ್, ಬ್ರಿಟನ್ ಹಾಗೂ ಅಂತರಾಷ್ಟ್ರೀಯ ನೆರವು ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಜೊತೆಗೆ, ತೆರವು ಕಾರ್ಯಾಚರಣೆಗೆ ನೆರವಾಗುತ್ತಿರುವ ಅಫ್ಗಾನ್ ನ ಸಂಘಟನೆಗಳೊಂದಿಗೂ ಸಂಪರ್ಕದಲ್ಲಿದ್ದೇವೆ . ಕರ್ತೆಪರ್ವಾನ್ ಗುರುದ್ವಾರದಿಂದ ಕಾಬೂಲ್ ವಿಮಾನನಿಲ್ದಾಣ ಕೇವಲ 10 ಕಿ.ಮೀ ದೂರದಲ್ಲಿದೆ. ಆದರೆ ಮಾರ್ಗಮಧ್ಯೆ ಹಲವು ತಪಾಸಣಾ ಕೇಂದ್ರಗಳಿರುವುದು ಸಮಸ್ಯೆಗೆ ಕಾರಣವಾಗಿದೆ. ಹಲವರು ಕಳೆದ ವಾರ ಕಾಬೂಲ್ ವಿಮಾನ ನಿಲ್ದಾಣ ತಲುಪಲು ವಿಫಲ ಪ್ರಯತ್ನ ನಡೆಸಿದ್ದಾರೆ ಎಂದು ಸಂಘಟನೆ ಹೇಳಿದೆ.