ದೇವನಹಳ್ಳಿ:
ತಾಲೂಕಿನ 24 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಇದೆ ಅಲ್ಲಿನ ಜನಪ್ರತಿನಿಧಿಗಳು ನರ್ಸಿಂಗ್ ಮಾಡಿದ ವ್ಯಕ್ತಿಗಳನ್ನು ಸೂಚಿಸಿದ್ರೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಸ್ಥಳದಲ್ಲೆ ಅವರಿಗೆ ಕರ್ತವ್ಯದ ಆದೇಶ ಪತ್ರ ಕೊಡಿಸುತ್ತೇನೆ, ನಿಮ್ಮ ಪ್ರಾಣ ರಕ್ಷಣೆ ಮಾಡಲು ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ಸಲಹೆ ಸೂಚನೆ ನಿರಾಕರಿಸಿ ದೌರ್ಜನ್ಯ ಮಾಡಿದರೆ ಅಂತಹವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಮಾಡಲು ಸೂಚಿಸಿದ್ದೇನೆ, ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ನನ್ನ ಕೆಲಸದ ಅವಧಿ ಮುಗಿದಿದೆ ಎಂದು ಹೇಳಿ ಉದಾಸೀನ ಮಾಡಿ ಕೈಚೆಲ್ಲಿ ಕೂರಬಾರದು ಸಾರ್ವಜನಿಕರು ಯಾವ ವೇಳೆಯಲ್ಲಿ ಕರೆ ಮಾಡಿದರೂ ಸ್ಪಂದಿಸುವ ಕೆಲಸವಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊರೋನಾ ಸೊಂಕು ತಗುಲಿದ ವ್ಯಕ್ತಿಗಳಿಗೆ ಪಂಚಾಯತಿ ವತಿಯಿಂದ ಏನೆಲ್ಲಾ ಸರ್ಕಾರಿ ಸವಲತ್ತುಗಳನ್ನು ನೀಡುತ್ತಿದ್ದಾರೆ ಹೋಂ ಐಸೋಲೇಷನ್ ನಲ್ಲಿ ಎಷ್ಟು ಮಂದಿ ಇದ್ದಾರೆ ಎಷ್ಟು ಮಂದಿ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗಿದ್ದಾರೆ ಪಂಚಾಯತಿ ವ್ಯಾಪ್ತಿಯಲ್ಲಿ ಎಷ್ಟು ಸಂಖ್ಯೆಯಲ್ಲಿ ಸೊಂಕಿತರಿದ್ದಾರೆ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಹಾಗೂ ಅಧಿಕಾರಿಗಳು ಯಾವ ರೀತಿಯಾದ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರಯವುದರ ಬಗ್ಗೆ ಮಾಹಿತಿ ನೀಡಿದರು.
ಸಾರ್ವಜನಿಕರು ಅಧಿಕಾರಿಗಳ ಮೇಲೆ ಹೆಚ್ಚು ಭರವಸೆಯಿಟ್ಟಿರುತ್ತಾರೆ, ಸೊಂಕಿತರಿಗೆ ಬೆಡ್ ತಕ್ಷಣ ದೊರೆಯುವ ವ್ಯವಸ್ಥೆ ಮಾಡಬೇಕು, ಸೋಂಕಿತರ ಮನ ಒಲಿಸಿ ಕೋವಿಡ್ ಕೇರ್ ಸೆಂಟರ್ ಗಳಿಗೆ ಸೇರಿಸಬೇಕು ಮುಂದಿನ ಸಭೆ ವೇಳೆಗೆ ಸೊಂಕಿತರ ಸಂಖ್ಯೆ ಶೂನ್ಯವಾಗಿರಬೇಕು ಇಲ್ಲದಿದ್ದರೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಿಂದ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಹೋಂ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳಿಗೆ ಪ್ರತಿ ದಿನ ಗಮನಿಸಿ ತಿಳಿಹೇಳಬೇಕು ಎಂದು ಶಾಸಕರು ಸಲಹೆ ಸೂಚನೆ ನೀಡಿದರು.
ಬೆಟ್ಟಕೋಟೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬೀರೇಶ್ ಮಾತನಾಡಿ ನಮ್ಮ ಪಂಚಾಯತಿಗಳಿಗೆ ತೆರಿಗೆ ಕಟ್ಟಲು ಯಾರೂ ಬರುತ್ತಿಲ್ಲಾ ಕೋವಿಡ್ ನಿಂದ ಗ್ರಾಮದಲ್ಲಿ ಸಂಪೂರ್ಣ ಸ್ಯಾನಿಟೈಸ್ ಮಾಡಿಸಲು, ಮಾಸ್ಕ್ ನೀಡಲು, ಔಷಧಿ ಕಿಟ್ ಗಳನ್ನು ನೀಡಲು ಖರ್ಚು ಹೆಚ್ಚಾಗಿ ಬರುತ್ತಿರುವುದರಿಂದ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವನಹಳ್ಳಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್, ವಿಜಯಪುರ ಮತ್ತು ಚನ್ನರಾಯಪಟ್ಟಣ ಹೋಬಳಿಯ ಗ್ರಾಮ ಪಂಚಾಯತಿ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಗುರುಮೂರ್ತಿ ಬೂದಿಗೆರೆ
8861100990