ತುಮಕೂರು:ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಹಾಗು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಜಿ.ನಿಂಗರಾಜು ಅವರುಗಳ ನೇತೃತ್ವದಲ್ಲಿ ಶುಕ್ರವಾರ ನಗರದ ಮಾರುತಿ ಚಿತ್ರ ಮಂದಿರದ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್ ಎದುರು ಇಂಧನ ಬೆಲೆಗಳ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಾವೇಶಗೊಂಡ ನಂತರ ಮಾರುತಿ ಚಿತ್ರಮಂದಿರದ ಬಳಿ ತೆರಳಿ ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್,ವರ್ಷಕ್ಕೆ ಎರಡು ಕೋಟಿ ಉದ್ಯೋಗ,ಕಪ್ಪು ಹಣ ವಾಪಸ್,ಕಡಿಮೆದರದಲ್ಲಿ ಜನರಿಗೆ ಇಂಧನ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.ಅವೈಜ್ಞಾನಿಕ ನೊಟ್‌ಬ್ಯಾನ್,ಜಿ.ಎಸ್.ಟಿ,ಯಂತಹ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕು ಬೀದಿಗೆ ತಂದಿದ್ದಾರೆ.೩೩ ರೂ ಮೂಲ ಪೆಟ್ರೋಲ್ ಬೆಲೆಗೆ ೬೦ ರೂಗಳಿಗೆ ಹೆಚ್ಚಿನ ಸೆಸ್ ವಿಧಿಸುವ ಮೂಲಕ ಲೀಟರ್ ಬೆಲೆ ೧೦೦ ರೂ ದಾಟುವಂತೆ ಮಾಡಿ,ಜನಸಾಮಾನ್ಯರು ಕಣ್ಣೀರು ಹಾಕುವಂತೆ ಮಾಡಿದ್ದಾರೆ.
ಕೇಂದ್ರ ಸರಕಾರದ ವಿರುದ್ದ ಜನರು ಆಕ್ರೋಶಗೊಂಡಿದ್ದಾರೆ.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕೂಡ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ನೇತೃತ್ವದ ಸರಕಾರ ತಮ್ಮ ತಪ್ಪು ತಿದ್ದಿಕೊಂಡು, ತೈಲ ಬೆಲೆ ಇಳಿಸದಿದ್ದರೆ ಜನರ ಸರಕಾರದ ವಿರುದ್ದ ಬೀದಿಗಿಳಿಯದೆ ವಿಧಿಯಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಜಿ.ನಿಂಗರಾಜು ಮಾತನಾಡಿ,ಕೇಂದ್ರ ಸರಕಾರ ಎಗ್ಗಿಲ್ಲದೆ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ ಪರಿಣಾಮ ಇಂದು ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.ಇದರ ವಿರುದ್ದ ಕಾಂಗ್ರೆಸ್ ನಿರಂತರ ಹೋರಾಟ ರೂಪಿಸಲಿದೆ.ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆದು, ಸರಕಾರ ನಡೆಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಮುಖಂಡರಾದ ಶಿವಾಜಿ,ಕೋರ ರಾಜು, ಎಸ್.ಜಿ.ಕೃಷ್ಣಸ್ವಾಮಿ, ಕೇಂಪರಾಜು,ಚoದ್ರಶೇಖರ್,ಗುರುಪ್ರಸಾದ್,ಆರ್.ರವಿಕುಮಾರ್,ಗುರುಪ್ರಸಾದ್,ಎo.ಎನ್.ಹನುಮoತರಾಯಪ್ಪ, ನರಸಿಂಹ ಮೂರ್ತಿ,ಚಂದ್ರು,ಅಲ್ಪಸoಖ್ಯಾತ ಘಟಕದ,ತಾಮ್ಸಿ,ಸಂಜೀವ್‌ಕುಮಾರ್, ಫಾರೂಕ್,ದಾದಾಪೀರ್ ಮತ್ತಿತರರು ಪಾಲ್ಗೊಂಡಿದ್ದರು.