ತೆಲಂಗಾಣ ಕಲ್ಲಿದ್ದಲು ಗಣಿಯಲ್ಲಿ ಛಾವಣಿ ಕುಸಿದು ನಾಲ್ವರು ಕಾರ್ಮಿಕರು ಮೃತ್ಯು
ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಸಿಂಗರೇನಿ ಕೊಲಿಯಾರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ಮಾಲಕತ್ವದ ಕಲ್ಲಿದ್ದಲು ಗಣಿಯಲ್ಲಿ ಛಾವಣಿ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಶ್ರೀರಾಂಪುರ ಪ್ರದೇಶದಲ್ಲಿ ಛಾವಣಿಯನ್ನು ಸರಿಪಡಿಸುವ ವೇಳೆ ಈ ದುರಂತ ಸಂಭವಿಸಿದೆ ಎಂದು ಎಸ್‌ಸಿಸಿಎಲ್ ಮತ್ತು ಪೊಲೀಸರು ಹೇಳಿದ್ದಾರೆ.
ಛಾವಣಿಯ ಒಂದು ಭಾಗ ನಾಲ್ವರು ಕಾರ್ಮಿಕರ ಮೇಲೆ ಕುಸಿದಿದ್ದು, ಅವಶೇಷಗಳಡಿ ಸಿಲುಕಿ ಹಾಕಿಕೊಂಡ 32 ರಿಂದ 60 ವರ್ಷ ವಯಸ್ಸಿನ ಕಾರ್ಮಿಕರು ಜೀವಂತ ಸಮಾಧಿಯಾದರು ಎಂದು ಹೇಳಲಾಗಿದೆ.
ಮೃತ ಕಾರ್ಮಿಕರ ಕುಟುಂಬಕ್ಕೆ ಎಸ್‌ಸಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್.ಶ್ರೀಧರ್ ಸಾಂತ್ವನ ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿರುವ ಅವರು, ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಮುಂದೆಂದೂ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮೃತ ಕಾರ್ಮಿಕರ ಕುಟುಂಬದ ಒಬ್ಬ ಅರ್ಹ ಸದಸ್ಯರಿಗೆ ಉದ್ಯೋಗ ನೀಡುವ ಜತೆಗೆ 70 ಲಕ್ಷದಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರ.