ತುಮಕೂರು – ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಹೆದ್ದಾರಿ ಬಂದ್ ನಡೆಸುತ್ತಿದ್ದ ರೈತರುಗಳನ್ನು ಪೊಲೀಸರು ಬಲವಂತದಿಂದ ಬಂಧಿಸಿ ಬಸ್‌ಗೆ ಹತ್ತಿಸಿಕೊಂಡು ಹೋದ ಪ್ರಸಂಗ ನಗರದಲ್ಲಿ ಜರುಗಿತು.
ನಗರದ ಗುಬ್ಬಿ ಗೇಟ್ ಬಳಿ ಹೆದ್ದಾರಿ ತಡೆ ನಡೆಸಿದ ನೂರಾರು ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಏಳ್ಗೆ ಬದಲಿಗೆ ಮಾರಕವಾಗಿರುವಂತಹ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿವೆ. ಇದರಿಂದ ರೈತರ ಪ್ರಗತಿ ಸಾಧ್ಯವಿಲ್ಲ. ಕೂಡಲೇ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು ಎಂದು ರೈತರುಗಳು ಆಗ್ರಹಿಸಿದರು.
ಗುಬ್ಬಿ ಗೇಟ್‌ನಲ್ಲಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಹೆದ್ದಾರಿ ಬಂದ್ ನಡೆಸಿದ್ದರಿಂದ ಈ ಮಾರ್ಗದಲ್ಲಿ ಕೆಲ ನಿಮಿಷಗಳ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ರೈತರು ಗುಬ್ಬಿ ಗೇಟ್‌ನಲ್ಲಿ ಹೆದ್ದಾರಿ ತಡೆ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾನಿರತ ರೈತರನ್ನು ಬಲವಂತವಾಗಿ ಎಳೆದಾಡಿ ಹೆದ್ದಾರಿ ತೆರವುಗೊಳಿಸುವಂತೆ ಸೂಚನೆ ನೀಡಿದರು.
ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ರೈತರು ಹೆದ್ದಾರಿ ಬಂದ್ ತೆರವುಗೊಳಿಸದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಪೊಲೀಸರು ಸ್ಥಳಕ್ಕೆ ಖಾಸಗಿ ಬಸ್ಸೊಂದನ್ನು ಕರೆಸಿ ಬಂದ್ ನಡೆಸುತ್ತಿದ್ದ ಪ್ರತಿಭಟನಾನಿರತ ರೈತರುಗಳನ್ನು ಬಲವಂತವಾಗಿ ಎಳೆದೊಯ್ದು ಬಸ್‌ಗೆ ಹತ್ತಿಸಿಕೊಂಡು ತೆರಳಿದರು.
ರೈತರುಗಳು ಹೆದ್ದಾರಿ ಬಂದ್ ನಡೆಸಿದ ಕೇವಲ 20 ನಿಮಿಷದಲ್ಲೇ ಪೊಲೀಸರು ರೈತರನ್ನು ಬಂಧಿಸುವ ಮೂಲಕ ಹೆದ್ದಾರಿ ಬಂದ್ ತೆರವುಗೊಳಿಸುವಲ್ಲಿ ಸಫಲರಾದರು.
ಪೊಲೀಸರು ಮತ್ತು ಸರ್ಕಾರಗಳ ಧೋರಣೆ ವಿರುದ್ಧ ಬಸ್‌ನಲ್ಲಿ ಬಂಧಿತರಾಗಿದ್ದ ರೈತರುಗಳು ಕಿಡಿಕಾರಿ, ಕೂಡಲೇ ನೂತನ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು. ಈ ಕಾಯ್ದೆಗಳು ವಾಪಸ್ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಗುಡುಗಿದರು.