ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿಗೆ ಶ್ರೀಗಂಧ ಕಳ್ಳ ಸಾವು
ಕುಣಿಗಲ್-ಶ್ರೀಗಂಧಚೋರರು ಅರಣ್ಯ ಸಿಬ್ಬಂದಿಮೇಲೆ ಮಚ್ಚಿನಿಂದಹಲ್ಲೆ ನಡೆಸಿದ್ದು, ಪ್ರಾಣ ರಕ್ಷಣೆಗೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಶ್ರೀಗಂಧಚೋರನೊಬ್ಬ ಮೃತಪಟ್ಟಿರುವ ಘಟನೆ ಹುಲಿಯೂರುದುರ್ಗಹೋಬಳಿಯ ಕಂಪಲಾಪುರ ಶ್ರೀಗಂಧಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಕಂಪಲಾಪುರಗ್ರಾಮದಲ್ಲಿ ಬ್ರಿಟೀಷರ ಕಾಲದಿಂದಲೂ ಸುಮಾರು ಮೂರುವರೆಸಾವಿರ ಎಕರೆ ಪ್ರದೇಶದಲ್ಲಿ ಶ್ರೀಗಂಧ ಮೀಸಲು ಅರಣ್ಯ ಪ್ರದೇಶವಿದೆ. ಈ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲು ಅರಣ್ಯಇಲಾಖೆ ಅಗತ್ಯ ಸುರಕ್ಷಿತಕ್ರಮಗಳೊಂದಿಗೆ ಹಲವಾರು ದಶಕಗಳಿಂದ ಶ್ರಮಿಸುತ್ತಿದೆ. ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಶ್ರೀಗಂಧದ ಕಳವಿಗೆ ಬಂದಿರುವ ಮಾಹಿತಿ ಅರಣ್ಯ ಇಲಾಖೆ ಸಿಬ್ಬಂದಿಗೆ ಲಭ್ಯವಾದ ಹಿನ್ನೆಲೆಯಲ್ಲಿ ಆರ್‌ಎಫ್‌ಒ ಮಹಮದ್ ಮನ್ಸೂರ್ ನೇತೃತ್ವದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿದರು. ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಶ್ರೀಗಂಧಚೋರರ ಪತ್ತೆಗೆ ಕಾರ್ಯಾಚರಣೆ ನಡೆಸಿದರು.
ಮೂರರಿಂದ ನಾಲ್ಕು ಮಂದಿ ಇದ್ದ ಶ್ರೀಗಂಧಚೋರರ ಗುಂಪು ಹದಿನೈದನ್ನು ಹೆಚ್ಚು ಮರಕಟಾವು ಮಾಡಿ, ಸಾಗಾಣೆಗೆ ಸಿದ್ದತೆ ನಡೆಸಿದ್ದರು. ಮರ ಕಟಾವಿನ ಶಬ್ದ ಅನುಸರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಧಾಳಿ ಮಾಡಿ ಹಿಡಿಯಲು ಮುಂದಾದಾಗ, ಚೋರರು ಸಿಬ್ಬಂದಿ ಮೇಲೆ ಕಲ್ಲು ತೂರಿ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದರು. ಎಚ್ಚರಿಕೆ ಕ್ರಮವಾಗಿ ಅರಣ್ಯಸಿಬ್ಬಂದಿ ಗಾಳಿಯಲ್ಲಿ ಗುಂಡುಹಾರಿಸಿದರೂ ಬೆದರದ ಚೋರರು ಏಕಾಏಕಿ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದಾಗ ಘರ್ಷಣೆಯಲ್ಲಿ ಅರಣ್ಯಇಲಾಖೆ ಗಾರ್ಡ್ ಶೇಖರ್‌ಗೆ ಗಾಯವಾದ ಹಿನ್ನೆಲೆಯಲ್ಲಿ, ಇತರೆ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಚೋರರ ಪೈಕಿ ಒಬ್ಬ ಮೃತಪಟ್ಟಿದ್ದು ಇತರರು ಕಾಲಿಗೆ ಬುದ್ದಿ ಹೇಳಿದ್ದಾರೆ. ಮೃತನ ವಿವರ ಪತ್ತೆಯಾಗಿಲ್ಲ ಗಾಯಾಳು ಗಾರ್ಡನನ್ನು ಚಿಕಿತ್ಸೆಗೆ ಅಸ್ಪತ್ರೆಗೆ ದಾಖಲಿಸಿದ್ದಾರೆ.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್ಪಿ ರಾಹುಲ್‌ಕುಮಾರ್, ಉಪರಣ್ಯಸಂರಕ್ಷಣಾಧಿಕಾರಿ ಡಾ.ರಮೇಶ್, ಸಜಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕರಾಜೇಂದ್ರ, ಡಿವೈಎಸ್ಪಿ ರಮೇಶ್, ಸಿಪಿಐ ಗುರುಪ್ರಸಾದ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.