ಬೆಂಗಳೂರು : ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದನ್ನು ಪಾಲಿಸದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೂಡ ಏರಿಕೆಯಾಗುತ್ತಿದೆ ಅಂತ ಎಚ್ಚರಿಕೆ ನೀಡಿದರು.
ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಪಾಡಿ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಅಂತ ಮುಖ್ಯಮಂತ್ರಿ ಈಗಾಗಲೇ ಜನತೆಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಜಾಹೀರಾತು ಕೊಟ್ಟು ಜಾಗೃತಿ ಮೂಡಿಸುತ್ತೇವೆ.ಲಸಿಕೆ ವಿತರಣೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು.ಇದುವರೆಗೂ 15 ಲಕ್ಷ ಜನರಿಗೆ ಲಸಿಕೆ ನೀಡಿದ್ದೇವೆ. ಪ್ರತೀ ದಿನ ಪ್ರಾಥಮಿಕ ಸರಕಾರಿ ಆಸ್ಪತ್ರೆಗಳಲ್ಲಿ 100 ಜನರಿಗೆ ಟೆಸ್ಟ್ ಮಾಡಲೇ ಬೇಕು. ಜನರಲ್ ಆಸ್ಪತ್ರೆಗಳಲ್ಲಿ 500 ಜನರಿಗೆ ಲಸಿಕೆ ಟಾರ್ಗೆಟ್ ನೀಡಿದ್ದೇವೆ. ಪ್ರತಿ ಸೋಂಕಿತ ವ್ಯಕ್ತಿಗೆ 20 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ಮಾಡಲೇ ಬೇಕು ಎಂದು ಸುಧಾಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ರವರು ಆರೋಗ್ಯ ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ 50 ದಿನಗಳವರೆಗೆ ರಜೆಯನ್ನು ರದ್ದುಪಡಿಸಲಾಗಿದೆ. ಕೋವಿಡ್ ಎರಡನೆಯ ಮುನ್ಸೂಚನೆ ಇದ್ದು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲೆಂದು 50 ದಿನಗಳವರೆಗೆ ರಜೆಯನ್ನು ರದ್ದು ಪಡಿಸಿದ್ದೇವೆ ಇದರ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಸಹ ರಜೆಯನ್ನು ರದ್ದುಪಡಿಸಿದ್ದು ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕು ಆಗಿದೆ ಎಂದು ತಿಳಿಸಿದರು.