ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನಿರಾಸೆ ಮೂಡಿಸಿದೆ: ಡಾ.ಜಿ.ಪರಮೇಶ್ವರ್.
ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು ತಮಗೆ ನಿರಾಸೆ ಮೂಡಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್ ಹೇಳಿದರು
ಅವರು ನಗರದ ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾವು ಮತ್ತು ಪಕ್ಷ ಪ್ರಸ್ತುತ ನಡೆದ ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಿದ್ದು ಅಂತಿಮವಾಗಿ ಪಕ್ಷಕ್ಕೆ ಹಿನ್ನೆಡೆಯಾಗಿದ್ದು ಅದಕ್ಕೆ ಕಾರಣಗಳನ್ನು ಹುಡುಕಬೇಕಿದೆ ಎಂದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಗಿಂತಲೂ ಪ್ರಿಯಾಂಕ ಗಾಂಧಿಯವರು ಹೆಚ್ಚಿನ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದರು, ಜನರನ್ನು ತಲುಪುವ ಪ್ರಯತ್ನ ಮಾಡಿದರು ಆದರೂ ಮತಗಳು ಬೇರೆಯವರ ಪಾಲಾಗಿವೆ. ದೇಶದಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆಯಾಗುತ್ತಿದೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿದೆ ಎನ್ನುವ ವಾತಾವರಣವಿದ್ದರೂ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದರೆ ಏನೋ ಕಾರಣ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದರು.
ದೇಶದ ಅಭಿವೃದ್ಧಿ ದೃಷ್ಠಿಯಿಂದ 2024ರ ಲೋಕಸಭಾ ಚುನಾವಣೆ ಅತ್ಯಂತ ಪ್ರಮುಖವಾದುದ್ದಾಗಿದ್ದು ಅಷ್ಟರೊಳಗೆ ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಸದೃಢಗೊಳಿಸಬೇಕು. ಇ.ವಿ.ಎಂ. ಬಗ್ಗೆ ತಮಗೇ ಮೊದಲಿನಿಂದಲೂ ಅನುಮಾನ ಇದ್ದು ಈಗಲೂ ಸಹ ಅನುಮಾನ ಇದೆ. ಇ.ವಿ.ಎಂ. ತಿರುಚುವ ತಂತ್ರಜ್ಞಾನವನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಬೇರೆ ಬೇರೆ ದೇಶದಿಂದ ಅದನ್ನು ಆಪರೇಟ್ ಮಾಡುತ್ತಾರೆ ಎಂದು ಕೇಳಿದ್ದು, ಅನೇಕ ಬಾರಿ ಆ ಗುಮಾನಿ ತಮಗೂ ಸಹ ಬಂದಿದೆ. ತಂತ್ರಜ್ಞರು ವ್ಯಕ್ತಪಡಿಸುತ್ತರುವ ಅಭಿಪ್ರಾಯ ನೋಡಿದಾಗ ಇ.ವಿ.ಎಂ.ಹ್ಯಾಕ್ ಆಗಿರಬಹುದು ಎನಿಸುತ್ತದೆ. ಆದರೆ ಅದು ಕೇವಲ ಆರೋಪ ಅಷ್ಟೆ ಆಗಿದ್ದು, ಸ್ಪಷ್ಟವಾಗಿ ತಮಗೆ ತಿಳಿದಿಲ್ಲ.
ಉತ್ತರಪ್ರದೇಶ 80 ಲೋಕಸಭಾ ಸದಸ್ಯರಿರುವ ರಾಜ್ಯ ಹಾಗಾಗಿ ರಾಜ್ಯದಲ್ಲಿ ಪಕ್ಷ ಆಡಳಿತಕ್ಕೆ ಬಂದರೆ ಸಂಸತ್ ಚುನಾವಣೆ ಸುಲಭವಾಗಿ ಗೆಲ್ಲಬಹುದಾಗಿದೆ. ಹಾಗಾಗಿ ಇ.ವಿ.ಎಂ.ಹ್ಯಾಕ್ ಆಗಿರುವ ಬಗ್ಗೆ ಎಲ್ಲರಿಗೂ ಅನುಮಾನ ಮೂಡುತ್ತದೆ ಹಾಗಾಗಿ ಬ್ಯಾಲೆಟ್ ಪೇಪರ್ ಪದ್ದತಿ ಮತ್ತೆ ತರಬೇಕೆಂದು ತಾವು ಒತ್ತಾಯಿಸುವುದಾಗಿ ತಿಳಿಸಿದರು.
*ಡಿ.ಕೆ.ಶಿ.ಸ್ವಾತಂತ್ರ್ಯರಾಗಿದ್ದಾರೆ*
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಾತಂತ್ರಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಮೇಲೆ ಯಾರ ನಿಯಂತ್ರಣವೂ ಇಲ್ಲ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಕ್ಷದ ಪರವಾಗಿ ತೆಗೆದುಕೊಳ್ಳಬೇಕಾದ ಎಲ್ಲ ನಿರ್ಣಯಗಳನ್ನು ಎಲ್ಲರ ಬಳಿ ಚರ್ಚೆ ಮಾಡಿ ತೆಗೆದುಕೊಳ್ಳುತ್ತಾರೆ. ಮೇಕೆದಾಟು ಪಾದಯಾತ್ರೆ ಯೋಜನೆ ರೂಪಿಸುವ ಸಂದರ್ಭದಲ್ಲೂ ಸಹ ಎಲ್ಲರೊಂದಿಗೆ ಚರ್ಚೆ ಮಾಡಿದ್ದಾರೆ. ಎಲ್ಲ ನಾಯಕರೂ ಸಹ ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಿದ್ದಾರೆ. ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದು ತಿಳಿಸಿದರು.