ಭಯ, ಭಯ, ಭಯ !!!! ಕರೋನಾ ಭಯ, ಅದರಲ್ಲೂ ನಮ್ಮ ಘನ ಸರ್ಕಾರದ ನಿರ್ಲಕ್ಷ್ಯ ಇನ್ನಷ್ಟು ಭಯ

 

 

ಹೌದು ಸ್ವಾಮಿ, ನಾನು ಹೇಳಲು ಹೊರಟಿರುವುದು ಇದೇ ಮಹಾಮಾರಿ ಕರೋನಾ ಭಯದ ವಿಷಯವಾಗಿ, ಪ್ರಪಂಚಕ್ಕೆ ಕರೋನಾ ಪರಿಚಯ ಮಾಡಿಕೊಟ್ಟ ಪಕ್ಕದ ಚೀನಾ ದೇಶದಲ್ಲಿ ಪ್ರಸ್ತುತ ಕರೋನ ರೋಗಿಗಳು ಇರುವುದು ಬೆರಳೆಣಿಕೆಷ್ಟು ಮಾತ್ರ! ಬೇಕಾದಲ್ಲಿ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿ !!!! ಆದರೆ ನಮ್ಮ ದೇಶದಲ್ಲಿ ಆರೋಗ್ಯವಾಗಿರುವ ಜೀವಿಗಳು ಬೆರಳೆಣಿಕೆಯಷ್ಟು ಜನ ಮಾತ್ರ, ಹೌದು ಇದು ನಂಬಲು ಕಷ್ಟವಾದರೂ ಕಟು ಸತ್ಯ, ಹೇಗೆ ಎನ್ನುವಿರಾ, ಕರೋನಾ ಬಂದು ಹಲವಾರು ಜನ ನರಳಾಡುತ್ತಿದ್ದರೆ, ಇನ್ನಷ್ಟು ಜನ ತಾವಿರುವ ಜಾಗದಲ್ಲಿಯೇ ಅಂದರೆ ಮನೆಯಲ್ಲಿಯೇ ಇದ್ದರೂ ಭಯದಿಂದ ನರಳಾಡುತ್ತಾ ಅರ್ಧ ಮನೋ ರೋಗಿಗಳಾಗಿ ಮಾರ್ಪಾಡಾಗುತ್ತಿದ್ದಾರೆ, ಒಮ್ಮೆ ಯೋಚಿಸಿ ನೋಡಿ, ಈ ಕ್ರೂರಿ ಕರೋನ ಜನರ ಮನಸ್ಸಿನಲ್ಲಿ ಎಷ್ಟರ ಮಟ್ಟಿಗೆ ಬೇರೂರಿದೆಂದು.

ಇನ್ನಾ ನಮ್ಮ ಘನ ಸರ್ಕಾರಗಳು ತರುತ್ತಿರುವ ನಿಯಮಗಳಾ ಅಬ್ಬಾ ಆ ದೇವರಿಗೆ ಬಲ್ಲ ! ಇವರುಗಳಿಗೆ ಜನರ ಪ್ರಾಣಗಳಿಗಿಂತ ತಮ್ಮ ಸ್ವ-ಹಿತಾಸಕ್ತಿಗಳೇ ಹೆಚ್ಚೆಂದು ಭಾವಿಸುತ್ತಿರುವುದು ಶೋಚನಿಯ ಸಂಗತಿಯಾಗಿದೆ. ಇಲ್ಲಿ ಜನರ ತಮ್ಮ ಜೀವಗಳು ಕರೋನಾ ಮಹಾಮಾರಿಗೆ ಅರ್ಪಿಸುತ್ತಿದ್ದರೆ, ಆ ಅಮಾಯಕರ ಜೀವಗಳನ್ನು ರಕ್ಷಿಸಬೇಕಾಗಿರುವವರೇ ನಿರ್ಲಕ್ಷ್ಯತನ ಮಾಡಿ, ಆ ನಿರ್ಲಕ್ಷ್ಯವನ್ನು ಜನರ ಮೇಲೊಡ್ಡಿ ತಮ್ಮ ಸ್ವ-ಹಿತಾಸಕ್ತಿಗಳನ್ನು ಮೆರೆಯುತ್ತಿದ್ದಾರೆ. ನಮ್ಮ ದೇಶವು ಕಳೆದ ವರ್ಷ ಕರೋನಾ ಮಹಾಮಾರಿಯ ಮೊದಲನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿತೆಂದು ಪ್ರಪಂಚದ ಹಲವು ರಾಷ್ಟ್ರಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದವು, ಅದೇ ನೋಡಿ ನಮ್ಮ ರಾಜಕಾರಣಿಗಳಿಗೆ ತಲೆ ನಿಲ್ಲದಂತಾಗಿ, ಹೊಸ ತಳಿಗಳ ಕರೋನಾವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡವು, ಆಶ್ಚರ್ಯವಾಯಿತೇ !!!! ಒಮ್ಮೆ ಯೋಚಿಸಿ ನೋಡಿ, ಕಳೆದ ಅಕ್ಟೋಬರ್ ೨೦೨೦ ರಿಂದ ಫೆಬ್ರವರಿ ೨೦೨೧ರ ವರೆಗೆ ಬೇರೆ ದೇಶಗಳಿಂದ ಬಂದಂತಹವರನ್ನು ಯಾವುದೇ ಕ್ವಾರಂಟೈನ್ ಇಲ್ಲದೇ ಯಾವುದೇ ತಪಾಸಣೆಗಳು ಇಲ್ಲದೇ ನಮ್ಮ ದೇಶದೊಳಗೆ ಸ್ವೆಚ್ಛಾರವಾಗಿ ಓಡಾಡಲು ಬಿಟ್ಟು, ಇದೀಗ ಜನರ ನಿರ್ಲಕ್ಷ್ಯದಿಂದ ಕರೋನಾ ೨ನೇ ಅಲೆ ಎದ್ದಿದೆ ಎಂದರೆ ಯಾರದು ತಪ್ಪು? ಸರಿ ಹೋಗಲಿ, ಅದು ಸಾಲದೆಂಬಂತೆ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮಗಳ ಪಕ್ಷದ ನಾಯಕರ ಓಟ್ ಗಾಗಿ ಬೀದಿ ಬೀದಿಯಲ್ಲಿ ಮೆರವಣಿಗೆ ಅದೂವೇ ಸಾವಿರಾರು ಜನರನ್ನು ಕೂಡಿ ಹಾಕಿಕೊಂಡು ಮಾಡಿದರಲ್ಲಾ ಅವಾಗ ಅವರ ನಿರ್ಲಕ್ಷ್ಯತನ ಗೊತ್ತಾಗಲಿಲ್ಲವಾ? ಅದೂ ಹೋಗಲಿ, ಹಲವಾರು ತಜ್ಞರು ಹೇಳಿದ ಮಾತನ್ನು ತಳ್ಳಿ ಹಾಕಿ ಕುಂಭಮೇಳವನ್ನು ನಡೆಯಿಸಿ ಅಲ್ಲಿಂದ ಕರೋನಾ ಹಬ್ಬಿದಾಗ ಗೊತ್ತಾಗಲಿಲ್ಲವಾ ತಮ್ಮ ನಿರ್ಲಕ್ಷ್ಯತನ? ಇಷ್ಟೇಲ್ಲಾ ಹರಡಲು ತಾವೇ ಕಾರಣರಾದರೂ ಸಹ ಜನರ ಮೇಲೆ ಗೂಬೆ ಕೂರಿಸುತ್ತಿರುವ ನಮ್ಮ ಜನಪ್ರತಿನಿಧಿಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ !

ಇನ್ನಾ ಈ ಮಹಾಮಾರಿಯೂ ಗಲ್ಲಿ ಗಲ್ಲಿಗಳಲ್ಲೂ ವ್ಯಾಪಿಸಿ ಪ್ರತಿಯೊಬ್ಬರ ಎದೆಯನ್ನು ಸೀಳಿಕೊಂಡು ತನ್ನ ಮೃತ್ಯುಕೂಪಕ್ಕೆ ಕರೆದುಕೊಂಡು ಹೋಗುತ್ತಿದ್ದರೂ ಸಹ ನಾವು ಅದನ್ನು ಮಾಡುತ್ತಿದ್ದೇವೆ, ಇದನ್ನು ಮಾಡುತ್ತಿದ್ದೇವೆಂದು ತಿಪ್ಪೆ ಸಾರಿಸಿಕೊಂಡು ಓಡಾಡುತ್ತಿರುವ ಪ್ರತಿಯೊಬ್ಬ ಜನ ನಾಯಕ ಎಲ್ಲಿದ್ದಾರೋ ಗೊತ್ತಿಲ್ಲ? ಎಲ್ಲೋ ಬೆರಳೆಣಿಕೆಯಷ್ಟು ಜನರು ಪಾಪ ಬಡ ಜೀವಗಳಿಗಾಗಿ ಶ್ರಮಿಸುತ್ತಿರುವುದು ಕಾಣ ಸಿಗುತ್ತಿದ್ದಾರೆಯೇ ವಿನಃ, ಡಂಭಾಚಾರದ ಜನಸೇವಕರು ಕಣ್ಮರೆಯಾಗಿರುವುದು ಸತ್ಯ! ಹೋಗಲಿ ಅವರದೂ ಜೀವವಲ್ಲವೇ ಅವರ ಜೀವವೂ ಅವರಿಗೆ ಮುಖ್ಯವೇ ಆಗಿರುತ್ತದೆ, ಸರಿ.

ಪ್ರತಿ ನಿತ್ಯ ನಮ್ಮ ಭವ್ಯ ಭಾರತ ದೇಶದಲ್ಲಿ ಸರಿಸುಮಾರು ೪೦೦೦ ಜನರು ಮರಣ ಹೊಂದುತ್ತಿರುವುದು ನೋಡುತ್ತಿದ್ದೇವೆ, ಈ ಎಲ್ಲಾ ಸಾವುಗಳಿಗೆ ಬೆಲೆಯಿಲ್ಲವೇ ಈ ಸರ್ಕಾರಗಳು, ಜನಪ್ರತಿನಿಧಿಗಳು ಎಲ್ಲಾ ಜನರು ಸತ್ತ ಮೇಲೆ ಅಧಿಕಾರ ನಡೆಸಲು ತಯಾರಿ ನಡೆಸಿದ್ದಾರೆಯೇ? ಪ್ರತಿಯೊಬ್ಬರಿಗೂ ಕರೋನಾ ಲಸಿಕೆಯನ್ನು ಹಾಕುವುದಾಗಿ ಹೇಳುತ್ತಿದ್ದಾರೆಯೇ ವಿನಃ ಅದನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇಷ್ಟೇಲ್ಲಾ ವ್ಯವಸ್ಥೆಯಿದ್ದರೂ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯವನ್ನು ಮಾಡಿದ್ದರೆ ಸ್ವಲ್ಪ ಸಾವು ನೋವುಗಳಾದರೂ ಕಡಿಮೆ ಆಗುತ್ತಿದ್ದವೇನೋ ಗೊತ್ತಿಲ್ಲ!

ಪ್ರಸ್ತುತದ ದಿನಗಳಲ್ಲಿ ಒಬ್ಬ ಸಾಮಾನ್ಯ ಪ್ರಜೆ ತಾನು ಮನೆಯಿಂದ ಹೊರಗಡೆ ಹೋಗಲು ಭಯ ಪಡುತ್ತಿದ್ದಾನೆ, ಅಲ್ಲದೇ ಮನೆಯಲ್ಲಿಯೇ ಇದ್ದೂ ಸಹ ಭಯ ಪಡುತ್ತಿರುವ ಅನುಭವಗಳು ಆಗುತ್ತಿದೆ, ಮನೆಯಿಂದ ಆಚೆ ಹೋದರೆ ಕರೋನಾ ಭಯ, ಮನೆಯಲ್ಲಿಯೇ ಇದ್ದರೆ ತನ್ನ ಭವಿಷತ್ ಬಗ್ಗೆ ಯೋಚಿಸಿ ಮುಂದಿನ ದಿನಗಳನ್ನು ಹೇಗೆ ಎದುರಿಸಬೇಕೋ ಎನ್ನುವ ಭಯ ಇದೀಗ ಎಲ್ಲರನ್ನೂ ಕಾಡುತ್ತಿದೆ. ಇನ್ಮುಂದಾದರೂ ನಮ್ಮನ್ನು ಆಳುತ್ತಿರುವವರು ಎಚ್ಚೆತ್ತು ಎಲ್ಲರ ಆರೋಗ್ಯದ ಕಡೆ ಗಮನ ಹರಿಸಿ, ಈ ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯನ್ನು ರಕ್ಷಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ, ಇಲ್ಲವಾದಲ್ಲಿ ಅರ್ಧ ಜನ ಕರೋನಾ ಮಹಾಮಾರಿಯಿಂದ ಭಯಪಟ್ಟರೆ, ಇನ್ನರ್ಧ ಜನ ನಾಳೆಯ ಭವಿಷತ್ನಿಂದ ಭಯ ಪಡುತ್ತಾರೆ.

ಭಯ – ಭಯ – ಭಯ

Leave a Reply

Your email address will not be published. Required fields are marked *

You cannot copy content of this page

error: Content is protected !!