ತಂದೆಯ ಸಾಧನೆಯ ಗರಿ-ಮಗ ಚಿ.ಮಲ್ಲಿಕಾರ್ಜುನನ ಮುಡಿಗೆ.

ತಂದೆಯ ಸಾಧನೆಯ ಗರಿ-ಮಗ ಚಿ.ಮಲ್ಲಿಕಾರ್ಜುನನ ಮುಡಿಗೆ.ಇದೊಂದು ಮನಮಿಡಿಯುವ, ಕರಳು ಹಿಂಡುವ ಕ್ರೂರಿ ಕರೋನಾ ಕರಾಮತ್ತಿನ ನಿಜ ಕಥೆ.

 

ವಿಜಯಪುರ ಜಿಲ್ಲೆಯ ನಾಲತವಾಡದ ಶ್ರೀ ವೀರೇಶ್ವರ ವಿದ್ಯಾ ಸಂಸ್ಥೆಯ ಹೆಮ್ಮೆಯ ಕುಸುಮ ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಆಂಗ್ಲ ವಿಭಾಗದ ಪ್ರತಿಭಾವಂತ ಪ್ರಾಧ್ಯಾಪಕ, ಜನಾನುರಾಗಿ, ಶಿಕ್ಷಣಪ್ರೇಮಿ, ಅಪಾರ ಸ್ನೇಹಿತ-ಶಿಷ್ಯಬಳಗ ಹೊಂದಿದ ಡಾ.ರಾಘವೇಂದ್ರ ಸಿ ಗೂಳಿ ಅವರ ಅಗಲುವಿಕೆಯ ಆಲಾಪದಲ್ಲಿರುವಾಗಲೆ

ಉತ್ತರ ಕರ್ನಾಟಕದ ವಿದ್ಯಾಕಾಶಿ “ಕರ್ನಾಟಕ ವಿಶ್ವವಿದ್ಯಾಲಯ” ದಿಂದ ಘಟಿಕೋತ್ಸವ ಸಮಾರಂಭದ ಆಮಂತ್ರಣ ಗೂಳಿಯವರ ಮನೆ ತಲುಪಿತು. ಅದನ್ನು ನೋಡಿದ ಅವರ ಶ್ರೀಮತಿ. ಯವರಿಗೆ, ಸಹೋದರರಿಗೆ, ಮಾವನವರಾದ ಇಲಕಲ್ಲ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಶ್ರೀ ಎಂ.ಎಸ್.ಪಾಟೀಲ ಮತ್ತು ಅವರ ಬಂಧು-ಮಿತ್ರರ ದುಃಖದ ಕಟ್ಟೆಯೊಡೆದು ಚಿಂತೆ ಮತ್ತೆ ಆವರಿಸುವಂತೆ ಮಾಡಿತ್ತು. ಕಾರಣವೆಂದರೆ-

 

ಪ್ರೊ.ರಾಘವೇಂದ್ರ ಗೂಳಿಯವರು ತಮ್ಮ ನೆಚ್ಚಿನ ಪ್ರಾಚಾರ್ಯ ಡಾ.ಪ್ರಭಾ ಗುಡ್ಡದಾನೇಶ್ವರಿ ಅವರಲ್ಲಿ “IMPACTS OF DIALOGUE METHOD ON ACHIEVEMENT AND IMPROVEMENT IN ENGLISH LANGUAGE SKILLS OF NINTH STANDARD” ಎಂಬ ವಿಷಯದ ಮೇಲೆ PhD ಮಾಡಲು ನೊಂದಾವಣೆಯೊಂದಿಗೆ ಪ್ರವೇಶ ಪಡೆದರು. ಅನವರತ ಅದ್ಯಯನ ಹಾಗೂ ಸಮರ್ಥ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಯು ಮುಗಿಯಿತು. ಪದವಿ ಪ್ರಮಾಣ ಪತ್ರ ಪಡೆಯುವ ಮೊದಲೆ ಕರುಣೆಯಿಲ್ಲದ ಕ್ರೂ ರಿ ಕರೋನ ದಿನಾಂಕ:೨೬-೦೫-೨೦೨೧ರಂದು ತನ್ನ ಕಬಂಧಬಾಹು ಚಾಚಿ ಡಾ.ರಾಘವೇಂದ್ರ ಅವರನ್ನು ನುಂಗಿ ಗೂಳಿ ಪರಿವಾರವನ್ನು ಕಂಗಾಲಾಗುವಂತೆ ಮಾಡಿತು.

ಈಗ ಮೇಲಿನ ಭಾವಚಿತ್ರದ ವಿಷಯಕ್ಕೆ ಬಂದರೆ- ಮನಮಿಡಿಯುವ, ಕಣ್ಣಾಲೆಗಳು ತನ್ನಿಂದತಾನೆ ತೇವಗೊಳ್ಳುವ ಪ್ರಸಂಗ. ಕ.ವಿ.ವಿ.ಧಾರವಾಡದಿಂದ ಡಾ.ರಾಘವೇಂದ್ರ ಗೂಳಿಯವರಿಗೆ ಘಟಿಕೋತ್ಸವ ಸಮಾರಂಭದಲ್ಲಿ ಪ್ರಮಾಣ ಪತ್ರ ಪಡೆಯುವಂತೆ ಮಾಹಿತಿ ಪತ್ರ. ಪತ್ರ ನೋಡಿದ ಮನೆಮಂದಿಗೆಲ್ಲ ಹೊಟ್ಟೆಗೆ ಬೆಂಕಿಬಿದ್ದ ಅನುಭವ. ಆದರೆ ಡಾ.ರಾಘು ಅವರ ಪಟ್ಟ ಪರಿಶ್ರಮ ವ್ಯರ್ಥವಾಗಬಾರದು. ಸದರಿ ಪ್ರಮಾಣ ಪತ್ರವನ್ನು ಅವರ ನೇರ ವಾರಸುದಾರ ಮಗ ಚಿ.ಮಲ್ಲಿಕಾರ್ಜುನ ಪಡೆದರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂಬ ಉದ್ದೇಶದಿಂದ ಮಾವನವರಾದ ಶ್ರೀ ಮಲ್ಲಿಕಾರ್ಜುನಗೌಡ ಎಸ್ ಪಾಟೀಲ್ ಅವರ ನಿರ್ದೇಶನದಂತೆ ಚಿ‌.ಮಲ್ಲಿಕಾರ್ಜುನನ ಸೋದರಮಾವನವರಾದ ಶ್ರೀ ವಿಜಯಕುಮಾರ ಹಾಗೂ ಶ್ರೀ ರವಿಚಂದ್ರ ಮತ್ತು ಡಾ.ಗೂಳಿ ರಾಘವೇಂದ್ರ ಅವರ ಮಿತ್ರರೆಲ್ಲರು ಕೂಡಿ ಘಟಿಕೋತ್ಸವದಲ್ಲಿ ಭಾಗವಹಿಸಿ ತಂದೆಯ ಸಾಧನೆಯ ಫಲವಾದ “ಪಿ.ಎಚ್‌‌.ಡಿ ಪ್ರಮಾಣ ಪತ್ರ” ವನ್ನು ಮಗ “ಮಲ್ಲಿಕಾರ್ಜುನ” ಸ್ವೀಕರಿಸಿದ. ಆ ಸಂದರ್ಭದಲ್ಲಿ ಈಡೀ ಸಭಾಂಗಣದಲ್ಲಿ ನೀರವ ವಾತಾವರಣ ಸೃಷ್ಟಿಯಾಯಿತು. ವೇದಿಕೆಯ ಮೇಲಿನ ಗಣ್ಯರು ಮತ್ತು ಸಭಾಸದರೆಲ್ಲರೂ ಮೂಕವಿಸ್ಮಿತರಾಗಿ, ಕಣ್ಣು ಎವೆಯಿಕ್ಕದೆ ನೋವಿನಿಂದ ವಿಧಿಯಾಟವನ್ನು ವೀಕ್ಷಿಸಿದರು‌ ಪ್ರೇಕ್ಷಕ ವರ್ಗದ ಕಣ್ಣಂಚಿನಲ್ಲಿ ತೇವ ತುಂಬಿ, ಹೃದಯ ಭಾರವಾದಂತೆ ಭಾಸವಾಗಿದ್ದಂತು ಸತ್ಯ. ಇಂತಹ ಮನಮಿಡಿಯುವ ಸನ್ನಿವೇಶಗಳು ಯಾವ ವೈರಿಯ ಬಾಳನಲ್ಲಿಯೂ ಬರಬಾರದು ಎಂಬ ಅಭಿಪ್ರಾಯ ಅನೇಕರದಾಗಿತ್ತು.

 

ತಂದೆಯ ಸಾಧನೆಯ ಪ್ರಮಾಣಪತ್ರ ಪಡೆದ ಮಗು ಅವರು ಸ್ಥಾಪಿಸಿದ ವಿದ್ಯಾಸಂಸ್ಥೆಯ ಸಾರಥ್ಯವಹಿಸಿ ಅದು ನಾಡಿನಲ್ಲಿಯೇ ಜನ ತಲೆಯೆತ್ತಿ ನೋಡುವಂತೆ ಮಾಡಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದರು. ಅವರ ಪರಿವಾರದವರಿಗೆಲ್ಲ ಭಗವಂತ ದುಃಖ ತಡೆದುಕೊಳ್ಳಲು ಶಕ್ತಿ ನೀಡಲಿ; ಡಾ.ರಾಘವೇಂದ್ರ ಅವರ ಅಂತರಾತ್ಮಕ್ಕೆ ಚಿರಶಾಂತಿ ನೀಡಲಿ ಎಂಬ ಪ್ರಾರ್ಥನೆ ನಮ್ಮದು.

Leave a Reply

Your email address will not be published. Required fields are marked *

You cannot copy content of this page

error: Content is protected !!