ಸಿಎಂ ಸ್ಥಾನ ಉಳಿಸಿಕೊಳ್ಳಲು ಬೊಮ್ಮಾಯಿಯಿಂದ ಆರೆಸ್ಸೆಸ್ ಹೊಗಳಿಕೆ: ಸಿದ್ದರಾಮಯ್ಯ

ಸಿಎಂ ಸ್ಥಾನ ಉಳಿಸಿಕೊಳ್ಳಲು ಬೊಮ್ಮಾಯಿಯಿಂದ ಆರೆಸ್ಸೆಸ್ ಹೊಗಳಿಕೆ: ಸಿದ್ದರಾಮಯ್ಯ

ಹುಬ್ಬಳ್ಳಿ: `ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕಾರಣ ಆರೆಸ್ಸೆಸ್ ಹೊಗಳುತ್ತಿದ್ದಾರೆ. ಬೊಮ್ಮಾಯಿ ಅವರೇನು ಮೂಲತಃ ಆರೆಸ್ಸೆಸ್ ಅಲ್ಲ. ಆದರೆ, ಇದೀಗ ಅವರು ಅಲ್ಲಿಗೆ ಹೋಗಿ ಸೇರಿಕೊಂಡಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

 

ಶನಿವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ಬಿ.ಎಸ್. ಯಡಿಯೂರಪ್ಪ ಅವರನ್ನು ಗೌಪ್ಯವಾಗಿ ಭೇಟಿ ಮಾಡಿದ್ದೇನೆಂಬುದು ಅಪ್ಪಟ ಸುಳ್ಳು. ಅದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಯಡಿಯೂರಪ್ಪ ಆರೆಸ್ಸೆಸ್‍ನಿಂದ ಬಂದವರು. ನಾನು ಅವರು ಸೇರಲು ಸಾಧ್ಯವೇ ಇಲ್ಲ’ ಎಂದು ನುಡಿದರು.

 

`ರಾಜಕೀಯವಾಗಿ ನಾನು ಆರೆಸ್ಸೆಸ್ ವಿರೋಧಿಸಿಕೊಂಡೇ ಬೆಳೆದವನು. ಅಧಿಕಾರದಲ್ಲಿದ್ದವರ ಮನೆ ಬಾಗಿಲಿಗೆ ನಾ ಎಂದೂ ಹೋಗಿಲ್ಲ. ಕಾಂಗ್ರೆಸ್ ಜಾತ್ಯತೀತ, ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರುವ ಪಕ್ಷ. ಬಿಜೆಪಿ ಇದಕ್ಕೆ ವಿರುದ್ಧವಾದ ಪಕ್ಷ ಎಂದ ಸಿದ್ದರಾಮಯ್ಯ, `ಈ ಹಿಂದೆ ಸಿಎಂ ಆಗಿದ್ದವರು ಶೆಟ್ಟರ್ ತಮ್ಮ ಮಾತಿಗೆ ತರ್ಕ ಇರಬೇಕು. ಉಗ್ರಪ್ಪ ಯಾರ ಶಿಷ್ಯರೂ ಅಲ್ಲ. ಅವರೊಬ್ಬ ನಾಯಕ ನನಗಿಂತಲೂ ಹಿರಿಯರು’ ಎಂದು ತಿರುಗೇಟು ನೀಡಿದರು.

 

`ಯಡಿಯೂರಪ್ಪರ ಮನೆಯಲ್ಲಿ ದುಡ್ಡು ಸಂಗ್ರಹವಾಗುತ್ತದೆ ಎಂದು ಯತ್ನಾಳ್, ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದರು. ಅದನ್ನೂ ನಾನೇ ಹೇಳಿಸಿದ್ದೆನಾ? ಎಲ್ಲದಕ್ಕೂ ನನ್ನನ್ನೇ ಟಾರ್ಗೆಟ್ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದು ಕಾಂಗ್ರೆಸ್. ಇನ್ನೂ ಅನೇಕ ಮುಸ್ಲಿಂ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ಹೀಗಿದ್ದಾಗ, ಕಾಂಗ್ರೆಗ್‍ನಲ್ಲಿ ಅಲ್ಪಸಂಖ್ಯಾತರಿಗೆ ಅಧಿಕಾರ ಸಿಗುತ್ತಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಟೀಕಿಸಿದರು.

 

`ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದಿರುವ ಅವರ ಜೊತೆ ಮಾತನಾಡುತ್ತೇನೆ. ಅವರು ಟಿಪ್ಪು ಬಗ್ಗೆ ಸರಿಯಾಗಿ ಓದಿಕೊಂಡಿಲ್ಲ. ಆರೆಸ್ಸೆಸ್‍ನವರೆಲ್ಲಾ ಸೇರಿಕೊಂಡು ಬೆಂಗಳೂರಿನ ವಿಮಾನ ನಿಲ್ದಾಣದ ಪಕ್ಕ 116 ಎಕರೆ ಜಾಗದಲ್ಲಿ ಚಾಣಕ್ಯ ವಿಶ್ವ ವಿದ್ಯಾಲಯ ಸ್ಥಾಪಿಸಲು ಮುಂದಾಗಿದ್ದಾರೆ. ಒಂದೊಂದು ಎಕರೆಗೆ ಕೆಐಎಡಿಬಿ 150 ಕೋಟಿ ರೂ.ನೀಡಿ, ಆ ಜಾಗ ಖರೀದಿಸಿತ್ತು. ಇದೀಗ ಅದರ ಬೆಲೆ ಅಂದಾಜು 1,000 ಕೋಟಿ ರೂ.ಗಳು ಇದೆ. ಆದರೆ, ಸರಕಾರ 50 ಕೋಟಿ ರೂ.ಗಳಿಗೆ ಅದನ್ನು ನೀಡಿದೆ ಎಂದರು.

 

ದೇಶ ಉದ್ಧಾರ ಮಾಡುತ್ತೇವೆ ಎನ್ನುತ್ತಿದ್ದ ಪ್ರಧಾನಿ ಮೋದಿಯವರು ದೇಶಕ್ಕೆ ಬಡತನ ಕೊಡುಗೆಯಾಗಿ ನೀಡಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ 2020ರಲ್ಲಿ ಭಾರತ 94ನೆ ಸ್ಥಾನದಲ್ಲಿತ್ತು. ಇದೀಗ 101ನೆ ಸ್ಥಾನಕ್ಕೆ ಬಂದಿದೆ. ಇದು ಪ್ರಧಾನಿ ಮೋದಿ ಅವರ ಕೊಡುಗೆ ಎಂದು ಸಿದ್ದರಾಮಯ್ಯ ಇದೇ ವೇಳೆ ಲೇವಡಿ ಮಾಡಿದರು.

`ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾರಾದರೂ ಮುಖ್ಯಮಂತ್ರಿಯಾಗಲಿ ನನಗೇನು ಬೇಸರವಿಲ್ಲ. ಯಾರನ್ನು ಸಿಎಂ ಮಾಡಬೇಕು ಎಂಬುದು ಶಾಸಕರಿಗೆ ಮತ್ತು ಹೈಕಮಾಂಡ್‍ಗೆ ಬಿಟ್ಟ ವಿಚಾರ. ಅಧಿಕಾರ ಬಂದ ನಂತರ ಮುಸ್ಲಿಂ, ದಲಿತ ಸಮುದಾಯದವರೂ ಸೇರಿದಂತೆ ಯಾರನ್ನೂ ಬೇಕಾದರು ಮುಖ್ಯಮಂತ್ರಿ ಮಾಡಲಿ. ನನ್ನ ಅಭ್ಯಂತರವಿಲ್ಲ’ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!