ಜಿಲ್ಲೆಯಲ್ಲಿ ಮೂರೂ ಪಕ್ಷಗಳ ಚುನಾವಣಾ ಹಣಾಹಣಿ
ತುಮಕೂರು : ಜಿಲ್ಲೆಯಲ್ಲಿ ಮೂರೂ ಪಕ್ಷಗಳು ಸ್ಥಾನ ಪಡೆಯಲು ಪೈಪೋಟಿಗೆ ಬಿದ್ದಿದ್ದು, ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ತನ್ನ ಆಡಳಿತ ವಿರೋಧಿ ಅಲೆಯಿಂದಾಗಿ ಈಗಿರುವ ಶಿರಾ, ತುಮಕೂರು ನಗರ, ತಿಪಟೂರು, ತುರುವೇಕೆರೆ, ಚಿ.ನಾ ಹಳ್ಳಿ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸೆಣಸಾಡುತ್ತಿದೆ. ಬಹುತೇಕ ಸ್ಪರ್ಧೆ ಏರ್ಪಡುವುದು ಕಾಂಗ್ರೆಸ್ ಮತ್ತು ಚುನಾವಣೆಗೆ ಹತ್ತು ತಿಂಗಳಿರುವಂತೆ ಕಾಂಗ್ರೆಸ್ ನಾಯಕರು ವಿವಿಧ ಜಾತಿ ಹಾಗೂ ಕೋಮಿನ ಸಮಾವೇಶಗಳನ್ನು ಮಾಡುತ್ತಾ ಬಂದಿದ್ದು, ಕಾಂಗ್ರೆಸ್ ಪರವಾದ ಅಲೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದರು.
ಚುನಾವಣೆ ಹತ್ತಿರಾದಂತೆ ಮ್ಯಾನಿಫೆಸ್ಟೋದಲ್ಲಿರುವ ವಿವಿಧ ಯೋಜನೆಗಳ ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ಮನೆ ಮನೆಗಳಿಗೆ ತಲುಪಿಸಲಾಗಿದೆ. ಈ ಮೂಲಕ ಕಾಂಗ್ರೆಸ್ ಕೆಳ ಸ್ತರದ ಜನರನ್ನು ತಲುಪಿದೆ. ಜಿಲ್ಲೆಯ ಘಟಾನುಘಟಿ ನಾಯಕರಾದ ಪರಮೇಶ್ವರ್, ಕೆ.ಎನ್.ರಾಜಣ್ಣ, ಟಿ.ಬಿ ಜಯಚಂದ್ರ ಅವರು ತಮ್ಮ ಕ್ಷೇತ್ರಗಳಲ್ಲೇ ತೊಡಗಿಕೊಂಡಿದ್ದು, ಇತರ ಕ್ಷೇತ್ರಗಳತ್ತ ಬರದೇ ಇರುವುದು ಕಾಂಗ್ರೆಸ್ ಗೆ ಎಫೆಕ್ಟ್ ಆಗಲಿದೆ. ಕೆಲವು ಕಾಂಗ್ರೆಸ್ ನಾಯಕರನ್ನು ಸೋಲಿಸುವ ವಂತೆ ಕರೆ ನೀಡುತ್ತಿರುವ ಜೆಡಿಎಸ್ ವರಿಷ್ಠರ (ತುಮಕೂರು ಕ್ಷೇತ್ರಗಳಲ್ಲಿ) ಮನೆಯಲ್ಲಿಯೇ ಸ್ಥಳೀಯ ಮುಖಂಡರು ಮನೆ ಖಾಲಿ ಮಾಡಿಕೊಂಡು ಕಾಂಗ್ರೆಸ್ ಕಡೆ ಹೊರಟು ಹೋಗಿರುವುದು ದಳಪತಿಗಳಗೆ ಆತಂಕವನ್ನು ತಂದೊಡ್ಡಿದೆ. ಅಂತಹ ಮಾಸ್ ಮುಖಂಡತ್ವ ಇಲ್ಲದ ಜೆಡಿಎಸ್ ಪಕ್ಷದ ಜನಪ್ರಿಯತೆಯನ್ನು ಮತಗಳನ್ನಾಗಿ ಪರಿರ್ತಿಸಲು ಎಷ್ಟು ಸಫಲವಾಗಿದೆ ಎಂಬುದನ್ನು ಫಲಿತಾಂಶ ನಿರ್ಧರಿಸಲಿದೆ.
ಕುಣಿಗಲ್ ನಲ್ಲಿ ಬಿಜೆಪಿಯಿಂದ ಟಿಕೇಟ್ ಆಕಾಂಕ್ಷಿಯಾಗಿದ್ದ ಎಸ್ಪಿ ಮುದ್ದ ಹನುಮೇಗೌಡ ಹಾಗೂ ರಾಜೇಶ್ ಗೌಡ ಅವರೊಂದಿಗೆ ಮಾತುಕತೆ ನಡೆಸಿ ಬಂಡಾಯ ತಣಿಸಿದ್ದ ಬಿಜೆಪಿಗೆ ಅವರಿಂದ ಪೂರ್ಣ ಮಟ್ಟದ ಸಹಕಾರ ದೊರೆಯುವುದು ಒಂದು ರೀತಿಯ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಾಗಿದೆ.
ಇತ್ತ ತಿಪಟೂರಿನಲ್ಲಿ ಆರ್‌ಎಸ್‌ಎಸ್ ಪರಿಪಾಲಕ ಬಿ.ಸಿ ನಾಗೇಶ್ ಗೆ ಲಿಂಗಾಯತರ ಒಲವು ಕಡಿಮೆಯಾಗಿದ್ದು, ಇದಕ್ಕೆ ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಿರುವುದೂ ಒಂದು ಕಾರಣ. ತಿಪಟೂರು ತೆಂಗು ಬೆಳೆಗೆ ಹೆಸರು ವಾಸಿಯಾಗಿದ್ದು, ಬೆಂಬಲ ಬೆಲೆಗೆ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದರೂ ಬಿ.ಸಿ.ನಾಗೇಶ್ ಅತ್ತ ಸುಳಿದಿಲ್ಲ. ಇದರಿಂದ ಸಚಿವರಿಗೆ ಆಡಳಿತ ವಿರೋಧದ ಬಿಸಿ ತಟ್ಟಲಿದೆ. ನಗರದಲ್ಲಿ ಜ್ಯೋತಿಗಣೇಶ್ ವಿರುದ್ಧ ಬಂಡೆದ್ದಿರುವ ಮಾಜಿ ಸಚಿವ ಸೊಗಡು ಶಿವಣ್ಣ ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದಾರೆ. ಮೊನ್ನೆ ಪ್ರಧಾನಿ ಯವರ ರೋಡ್ ಶೋ ದಿನ ಪ್ರಾದೇಶಿಕ ಪತ್ರಿಕೆಯೊಂದರಲ್ಲಿ ಬಿಜೆಪಿ ಜಾಹೀರಾತು ಮೇಲೆ ಸೊಗಡು ಶಿವಣ್ಣ ತನ್ನ ಜಾಹೀರಾತು ನೀಡಿ ಕೌಂಟರ್ ನೀಡಿದ್ದರು. ಸೊಗಡು ಕಾರಣದಿಂದ ಮತ ದೃವೀಕರಣವಾಗಲಿದ್ದು, ಇದು ಹೆಚ್ಚಿನ ರೀತಿಯಲ್ಲಿ ಬಿಜೆಪಿಗೆ ಹೊಡೆತ ಕೊಡಲಿದೆ.
ಚಿ.ನಾಹಳ್ಳಿಯಲ್ಲಿ ಮಾಧುಸ್ವಾಮಿಗೆ ತನ್ನ ನಾಲಿಗೆಯಿಂದ ಹಿನ್ನಡೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ.. ತಾಲೂಕಿನಲ್ಲಿ ಪೈಟ್ ಇರುವುದು ಕಾಂಗ್ರೆಸ್ ನ ಕಿರಣ್ ಕುಮಾರ್ ಮತ್ತು ಜೆಡಿಎಸ್ ನ ಸುರೇಶ್ ಬಾಬು ನಡುವೆ ಎಂಬುದು ಗೋಚರಿಸುತ್ತಿದೆ. ಕೊಟರಗೆರೆಯಲ್ಲಿ ಜಿ.ಪರಮೇಶ್ವರ್ ಅವರಿಗೆ ಸೋಲಿನ ಭಯ ಕಾಡುತ್ತಿದ್ದು, ಎಡಗೈ ಮತ್ತು ಬಲಗೈ ಮತಗಳು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಾರ್ಯತಂತ್ರ ಶುರುವಾಗಿದೆ. ಬಲಗೈ ಸಮುದಾಯ ಪರಮೇಶ್ವರ್ ಗೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಎಡಗೈ ಮತಗಳು ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಹರಿದು ಹಂಚಿ ಹೋಗಲಿವೆ. ಇದರಿಂದ ಪರಮೇಶ್ವರ್ ಗೆ ಆತಂಕ ಎದುರಾಗಿರುವುದಂತೂ ಸತ್ಯ. ಇಬ್ಬರ ನಡುವೆ ಮೌನವಾಗಿ ಪ್ರಚಾರ ಕಾರ್ಯ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ಸುಧಾಕರಲಾಲ್ ಗೆ ಅನುಕೂಲವಾಗಲಿದೆ. ಪರಮೇಶ್ವರ್ ತಲೆಯ ಮೇಲೆ ಕಲ್ಲು ಬಿದ್ದು ಪೆಟ್ಟಾಗಿರುವ ಸುದ್ದಿ ಚುನಾವಣೆಯಲ್ಲಿ ಪಾಸಿಟಿವ್ ಆಗಲಿದೆ ಎಂದು ಭಾವಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡುವಂತೆ ಕಾಣುತ್ತಿಲ್ಲ. ಬಿಜೆಪಿಯಿಂದ ಬಂಡಾಯವೆದ್ದಿರುವ ಕೆ.ಎಂ ಮುನಿಯಪ್ಪ ಬಿಜೆಪಿಗೆ ಮುಳುವಾಗಿದ್ದಾರೆ.
ಶಿರಾದಲ್ಲಿ ಹಾಲಿ ಇರುವ ಡಾ.ಸಿ.ಎಂ ರಾಜೇಶ್ ಗೌಡ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ಎಂಎಲ್ಎ ಬಿ.ಸತ್ಯನಾರಾಯಣ ನಿಧನ ಹೊಂದಿದ ನಂತರ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆದು ರಾಜೇಶ್ ಗೌಡ ಅವರನ್ನು ಆಗ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಚುನಾವಣಾ ಉಸ್ತುವಾರಿ ತೆಗೆದುಕೊಂಡು ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಸದ್ಯದ ಪರಿಸ್ಥಿಯಲ್ಲಿ ಅವರ ಅನುಪಸ್ಥಿತಿ ರಾಜೇಶ್ ಗೆ ಕಷ್ಟವಾಗಲಿದೆ. ಟಿ.ಬಿ ಜಯಚಂದ್ರ ಕೊನೆಯ ಚುನಾವಣೆ ಗೆಲ್ಲಿಸಿ ಎಂದು ಜನರಲ್ಲಿ ಮೊರೆ ಇಡುತ್ತಿದ್ದಾರೆ ಮತ್ತು ಗೆದ್ದರೆ ಶಿರಾವನ್ನು ಜಿಲ್ಲೆ ಮಾಡುತ್ತೇನೆ ಎನ್ನು ಭರವಸೆಯನ್ನೂ ನೀಡುತ್ತಿದ್ದಾರೆ. ಕಾಂಗ್ರೆಸ್ ನಿಂದ ಹೋದ ನಾಯಕರು ಜೆಡಿಎಸ್ ಅಭ್ಯರ್ಥಿ ಆರ್.ಉಗ್ರೇಶ್ ಅವರಿಗೆ ಬಲ ತುಂಬುತ್ತಿದ್ದಾರೆ ಎನ್ನು ಮಾತುಗಳು ಕೇಳಿ ಬರುತ್ತಿವೆ. ಟಿಬಿಜೆ ಅವರು ಹಿಂದಿನ ಬಾರಿ ಸೋತಿರುವುದು ಕೂಡ ಈ ಬಾರಿ ಅನುಕಂಪವನ್ನು ಗಿಟ್ಟಿಸಿಕೊಳ್ಳಲಿದೆ.
ಎಸ್ ಆರ್ ಶ್ರೀನಿವಾಸ್ ಕಾಂಗ್ರೆಸ್ ಗೆ ಬಂದ ನಂತರ ಟಿಕೇಟ್ ಆಕಾಂಕ್ಷಿಯಾಗಿದ್ದ ಹೊನ್ನಗಿರಿ ಗೌಡ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಅವರೊಂದಿಗೆ ಸೇರಿದರೆ, ಬಿಜೆಪಿ ಯಿಂದ ಬಂಡೆದದ್ದ ಬೆಟ್ಟಸ್ವಾಮಿ ಎಸ್.ಡಿ ದಿಲೀಪ್ ಕುಮಾರ್ ಗೆ ಕೈಕೊಟ್ಟು ಜೆಡಿಎಸ್ ಗೆ ಶಕ್ತಿ ತುಂಬಿದ್ದಾರೆ. ಇಲ್ಲಿ ಮೂರೂ ಪಕ್ಷಗಳಿಂದ ತ್ರಿಕೋನ ಸ್ಪರ್ಧೆಯಿದೆ.
ಕುಣಿಗಲ್ ನಲ್ಲಿ ಶಾಸಕ ಎಚ್.ಡಿ ರಂಗನಾಥ್ ಅವರಿಗೆ ಮಾಜಿ ಶಾಸಕ ಬಿ.ಬಿ ರಾಮಸ್ವಾಮಿಯವರ ಬಂಡಾಯ ಸ್ಪರ್ಧೆ ತಲೆನೋವು ತಂದಿದೆ. ಸತತ ಮೂರು ಬಾರಿ ಸೋಲು ಕಂಡಿರುವ ಡಿ.ಕೃಷ್ಣಕುಮಾರ್ ತನಗೆ ಕೊನೆಯ ಅವಕಾಶ ನೀಡುವಂತೆ ಜನರ ಮೊರೆ ಹೋಗಿದ್ದಾರೆ. ಜೆಡಿಎಸ್ ನ ಡಾ.ಎನ್.ಬಿ.ರವಿ ಓಟದಲ್ಲಿದ್ದಾರೆ. ತುಮಕೂರು ಗ್ರಾಮಾಂತರದಲ್ಲಿ ಹೊಸ ಮುಖ ಷಣ್ಮುಖಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಹಾಕುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಒಪ್ಪಂದ ಮಾಡಿ ಕೊಂಡಿದ್ದು, ಇದು ಕೊರಟಗೆರೆ ಕಾಂಗ್ರೆಸ್ ಗೆ ಅನುಕೂಲ ವಾಗಲಿದೆ. ಬಿಜೆಪಿಗೆ ಪೆಟ್ಟು ಬೀಳಲಿದೆ ಎನ್ನಲಾಗುತ್ತಿದೆ. ಪಾವಗಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಎದರುರಾಗಿದೆ.