ಚಾಮರಾಜನಗರ : ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ದುರಂತದಲ್ಲಿ ಮೃತಪಟ್ಟ 24 ಸೋಂಕಿತರ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆದೇಶ ನೀಡಬೇಕೆಂದು ಕೋರಿರುವ ಅರ್ಜಿಯನ್ನು ಪ್ರಾಥಮಿಕ ತನಿಖಾ ವರದಿ ನಂತರ ಪರಿಗಣಿಸುವುದಾಗಿ ಹೈಕೋರ್ಟ್ ಆದೇಶಿಸಿದೆ. ಘಟನೆಗೆ ಸಂಬಂಧಿಸಿದಂತೆ ವಕೀಲ ಶ್ರೀನಿವಾಸಮೂರ್ತಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ನ್ಯಾಯಪೀಠ, ಸರಕಾರದಿಂದ ನೇಮಿಸಿರುವ ಅಧಿಕಾರಿ ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಮಿತಿ ವರದಿ ಬರುವವರೆಗೆ ಆ ಮನವಿಯನ್ನು ಬಾಕಿ ಇಡಲಾಗುವುದು ಎಂದು ತಿಳಿಸಿದೆ.
ರಿಟ್ ಅರ್ಜಿಯಲ್ಲಿ ಅರ್ಜಿದಾರರು ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲರ ಮೃತದೇಹಗಳ ಶವ ಪರೀಕ್ಷೆ ನಡೆಸಬೇಕು. ಆ ಮೂಲಕ ಅವರು ನಿಜವಾಗಿಯೂ ಸೋಂಕಿನಿಂದ ಸಾವನ್ನಪ್ಪಿದ್ದಾರೆಯೇ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬೇಕೆಂದು ಕೋರಿದ್ದಾರೆ. ಆದರೆ, ಈ ಹಂತದಲ್ಲಿ ಸೋಂಕಿನಿಂದ ಸಾವನ್ನಪ್ಪುವ ಪ್ರತಿಯೊಬ್ಬ ವ್ಯಕ್ತಿಯ ಮೃತದೇಹವನ್ನು ಅಟಾಪ್ಸಿ ನಡೆಸಬೇಕೆಂದು ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.