ಸಹಾಯಹಸ್ತ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಲು ಡಾ. ಜಿ ಪರಮೇಶ್ವರ್ ಕರೆ

 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ವತಿಯಿಂದ ಹಮ್ಮಿಕೊಂಡಿರುವ ಸಹಾಯಹಸ್ತ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸಲು ಕಾರ್ಯಕರ್ತರಲ್ಲಿ ಕರೆ ನೀಡಿದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರು ಡಾಕ್ಟರ್ ಜಿ ಪರಮೇಶ್ವರ್.

 

ತುಮಕೂರಿನ ಕಾಂಗ್ರೆಸ್ ಕಚೇರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ರವರು ಭೇಟಿ ನೀಡಿದ್ದು ಇದೇ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 

ಇದೇ ಮೊದಲ ಬಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ರವರು ಜಿಲ್ಲೆಗೆ ಭೇಟಿ ನೀಡಿದ್ದು ಇದರ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದರು. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಲವು ಮಹತ್ತರ ಯೋಜನೆಗಳು ನೀಡುವ ಮೂಲಕ ದೇಶ ಹಾಗೂ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷ ನೆರವಾಗಿದೆ.

 

ಆದರೆ ಕರೋನ ಸಂದರ್ಭದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಜನ ಸಂಕಷ್ಟಕ್ಕೀಡಾಗಿದ್ದು ಲಕ್ಷಾಂತರ ಜನ ಜೀವ ತೆತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಾರ್ವಜನಿಕರ ಸಂಕಷ್ಟಗಳಿಗೆ ನೆರವಾಗಬೇಕೆಂದು ನಮ್ಮೆಲ್ಲರ ಕರ್ತವ್ಯವಾಗಿದೆ.

 

ಆದರೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಸಾರ್ವಜನಿಕರ ಸಂಕಷ್ಟಕ್ಕೆ ಸರಿಯಾದ ರೀತಿಯಲ್ಲಿ ನೆರವಾಗಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಜನತೆಗೆ ಸರಿಯಾದ ಮಾಹಿತಿ ನೀಡದೆ ರಾಜ್ಯದ ಜನತೆಯನ್ನು ದಿಕ್ಕುತಪ್ಪಿಸುವ ಪ್ರಯತ್ನ ಭಾರತೀಯ ಜನತಾ ಪಾರ್ಟಿ ಮಾಡುತ್ತಿದೆ ಎಂದರು.

 

ಕಾಂಗ್ರೆಸ್ ಪಕ್ಷ ಕರೋನ ಸಂಕಷ್ಟ ಕಾಲದಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಿದ್ದಾರೆ. ಮಾಸ್ಕ್, ಸ್ಯಾನಿಟೈಸರ್,ಆಂಬುಲೆನ್ಸ್, ದಿನಸಿ ಕಿಟ್, ಆಕ್ಸಿಜನ್ ಸಿಲೆಂಡರ್ ಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸಂಕಷ್ಟದಲ್ಲಿರುವ ಜನತೆಗೆ ಕಾಂಗ್ರೆಸ್ ಪಕ್ಷ ನೀಡಿದೆ.

 

ಅಧಿಕಾರದಲ್ಲಿರುವ ಸರ್ಕಾರ ಮಾಡದ ಕೆಲಸವನ್ನು ವಿರೋಧ ಪಕ್ಷದಲ್ಲಿ ಇದ್ದು ಕಾಂಗ್ರೆಸ್ ಪಕ್ಷ ಮಾಡಿದೆ. ಇದುವರೆಗೂ ನಮ್ಮ ಪಕ್ಷ ಮಾಡಿರುವ ಕೆಲಸವನ್ನು ಯಾವ ಪಕ್ಷಗಳು ಮಾಡಿಲ್ಲ.

ಕಾರ್ಯಧ್ಯಕ್ಷರ ಆದೇಶದಂತೆ ರಾಜ್ಯದ ಜನತೆಗೆ ಸಹಾಯ ಹಸ್ತದ ಕಾರ್ಯಕ್ರಮದ ಮೂಲಕ ಕಷ್ಟದಲ್ಲಿರುವ ಕುಟುಂಬಗಳು, ಕೋವಿಡ್ ಸೋಂಕಿಗೆ ತುತ್ತಾದವರು, ಕೋವಿಡ್ ಸೋಂಕಿಗೆ ಬಲಿಯಾದವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನೆರವೇರಬೇಕಾಗಿದೆ ಎಂದರು.

 

ರಾಜ್ಯದ ಜನತೆ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದಿನಬಳಕೆಯ ವಸ್ತುಗಳು, ಗ್ಯಾಸ್ ಹಾಗೂ ತೈಲ ಬೆಲೆಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಸುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಇದ್ಯಾವುದರ ಅರಿವು ಬಿಜೆಪಿ ಸರ್ಕಾರಕ್ಕೆ ಕಾಣುತ್ತಿಲ್ಲ ತೆರಿಗೆಯ ಹೊರೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಇಂದ ಸಾರ್ವಜನಿಕರು ಜೀವನ ನಡೆಸುವುದೇ ದುಸ್ತರವಾಗಿದೆ . ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕು ಹಾಗೂ ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜನತೆಯ ಮುಂದಿಡಬೇಕಾಗಿದೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಕರೆ ನೀಡಿದರು.

 

ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ತುಮಕೂರು ಜಿಲ್ಲೆಯ ವೀಕ್ಷಕರಾದ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಮುಖಂಡರಾದ ಕೆ. ಎನ್ ರಾಜಣ್ಣ, ಟಿ .ಬಿ ಜಯಚಂದ್ರ, ಪಾವಗಡದ ವೆಂಕಟರಮಣಪ್ಪ, ಮಾಜಿ ಶಾಸಕರಾದ , ಶಫಿ ಅಹಮದ್, ರಫೀಕ್ ಅಹಮದ್, ಕುಣಿಗಲ್ ಶಾಸಕ ರಂಗನಾಥ್, ಸೇರಿದಂತೆ ವಿವಿಧ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!