ಕಾಲೇಜು ಕ್ಯಾಂಪಸ್‌ಗಳಲ್ಲಿ ಕೋಮುವಾದ ಸೃಷ್ಟಿಸದಿರಿ: ಮಲ್ಲಿಕಾರ್ಜುನ ಖರ್ಗೆ.
ಬೆಂಗಳೂರು: ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಗಳು ಹತ್ತಿರಬರುತ್ತಿದ್ದು, ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ಈ ಅಶಾಂತಿಯು “ಬಿಜೆಪಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಬಯಸುತ್ತಾರೆ, ಪರೀಕ್ಷಾ ಸಮಯದಲ್ಲಿ ಕ್ಯಾಂಪಸ್‌ಗಳಲ್ಲಿ ಕೋಮು ಭಾವನೆಗಳನ್ನು ಹುಟ್ಟುಹಾಕುವುದು ಅತ್ಯಂತ ಬೇಜವಾಬ್ದಾರಿಯುತ ನಡೆಯಾಗಿದೆ. ಮಕ್ಕಳ ಭವಿಷ್ಯಕ್ಕೆ ಹಾನಿಕಾರಕವಾಗಿದೆ. ಸರಕಾರವು ಕ್ಯಾಂಪಸ್‌ಗಳಲ್ಲಿ ಕೋಮುವಾದವನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಮಕ್ಕಳ ಭವಿಷ್ಯವನ್ನು ನಾಶಮಾಡಲು ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಾಗೂ ಶಾಲಾ ಆಡಳಿತ ಸಮಿತಿಗಳ ಮೂಲಕ ಸರಕಾರ ಶ್ರಮಿಸಬೇಕಿದೆ. ಶಿಕ್ಷಣ ಕ್ಯಾಂಪಸ್‌ಗಳಲ್ಲಿ ಕೋಮುವಾದದ ಜ್ವಾಲೆಯನ್ನು ನಂದಿಸುವುದು ಸ್ಥಳೀಯ ಜಿಲ್ಲೆ ಮತ್ತು ಶಿಕ್ಷಣ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.