ಸರ್ವೇ ಆಗೋವರೆಗೂ ಕಾಲಿಡದಿರಿ: ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ವಾರ್ನಿಂಗ್ ನೀಡಿದ ಶಾಸಕ ಡಿ.ಸಿ.ಗೌರಿಶಂಕರ್
ತುಮಕೂರು ಗ್ರಾಮಾಂತರ : ಅರಣ್ಯ ಇಲಾಖೆ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಕುಂದೂರಿನಲ್ಲಿ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿರುವ ಶಾಸಕ ಡಿ.ಸಿ.ಗೌರಿಶಂಕರ್ ಜಂಟಿ ಸರ್ವೇ ಆಗೋವರೆಗೂ ಸ್ಥಳ ಕಾಲಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಊರ್ಡಿಗೆರೆ ಹೋಬಳಿಯ ಬೆಳಗುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ವಸತಿ ರಹಿತರು ಗುಡಿಸಲು ಹಾಕಿಕೊಂಡು ವಾಸವಿದ್ದರು. ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ಈ ಸ್ಥಳಕ್ಕೆ ಅರಣ್ಯ ಇಲಾಖೆಗೆ ಸೇರಿದ್ದು, ಕೂಡಲೇ ಗುಡಿಸಲನ್ನು ತೆರವುಗೊಳಿಸಬೇಕೆಂದು ತಿಳಿಸಿ ಅವರ ಗುಡಿಸಲುಗಳನ್ನು ತೆರವುಗೊಳಸಿಸಲು ಮುಂದಾಗಿದ್ದರು. ಈ ವಿಚಾರವಾಗಿ ಗುಡಿಸಲು ನಿವಾಸಿಗಳು ಅರಣ್ಯ ಇಲಾಖೆಯ ಸಿಬ್ಬಂದಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ವಿಷಯ ವ್ಯಾಪಕವಾಗಿ ಹರಡುತ್ತಿದ್ದಂತೆ ಸುದ್ದಿ ತಿಳಿದು ಖುದ್ದು ಸ್ಥಳಕ್ಕೆ ಬುಧವಾರ ಬೆಳಗಿನ ಜಾವ ಭೇಟಿ ನೀಡಿದ ಶಾಸಕ ಡಿ.ಸಿ.ಗೌರಿಶಂಕರ್ ಅಲ್ಲಿಯ ಸ್ಥಳ ಪರಿಶೀಲನೆ ನಡೆಸಿ, ಸ್ಥಳದ ದಾಖಲೆ ಪರಿಶೀಲನೆ ಮಾಡಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಕೆರೆ ಮಾಡಿ ಮಾತನಾಡಿ, ನಿಮ್ಮ ಅರಣ್ಯ ಇಲಾಖೆಯ ಜಾಗ ನಮಗೆ ಬೇಡ. ಸರ್ವೇ ಆಗಲಿ. ಎಲ್ಲಿ ಸರ್ವೇ ನಂಬರ್ ಜಾಗ ಬರುತ್ತದೆಯೋ ಅಲ್ಲಿಯೇ ನನ್ನ ಜನಕ್ಕೆ ಮನೆ ಕಟ್ಟಿಕೊಡುತ್ತೇನೆ. ಅಲ್ಲಿಯವರೆಗೂ ನೀವು ಜಾಗಕ್ಕೆ ಕಾಲಿಡಬೇಡಿ. ಈ ಬಗ್ಗೆ ತಹಶೀಲ್ದಾರ್ ಅವರಿಗೂ ಮಾತನಾಡುತ್ತೇನೆ, ಜಂಟಿ ಸರ್ವೆ ನಡೆಯುವವರೆಗೂ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಕಾಲಿಡಬಾರದೆಂದು ಖಡಕ್ ಸೂಚನೆ ನೀಡಿದರು. ಇನ್ನು ಇದೇ ವೇಳೆ ಗುಡಿಸಲು ನಿವಾಸಿಗಳೊಂದಿಗೆ ಮಾತನಾಡಿದ ಶಾಸಕರು ನಾನೇ ನಿಂತು ಈ ಜಾಗವನ್ನು ಮಟ್ಟ ಮಾಡಿಸಿ ಮನೆಕಟ್ಟಿಕೊಡುವವರೆಗೂ ನಿಮ್ಮ ಜೊತೆಗಿರುತ್ತೇನೆ, ಯಾವುದೇ ಕಾರಣಕ್ಕೂ ಹೆದರುವುದು ಬೇಡ, ಸರ್ವೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡು ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಹಾಲನೂರು ಅನಂತ್, ಬೆಳಗುಂಬ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಚೌಡಪ್ಪ, ಪಾಪಯ್ಯ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.