ಗಾಣಿಗರ ಕಾರ್ಯಾಗಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು

ದೇವನಹಳ್ಳಿಯ ಚಿಕ್ಕಸಣ್ಣೆ ಗೇಟ್ ನಲ್ಲಿ ಎಸ್.ಎಸ್.ಬಿ ಕನ್ವೆಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಗಾಣಿಗರ ಕಾರ್ಯಾಗಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರು

ದೇವನಹಳ್ಳಿ: ಹಿಂದುಳಿದ ಸಮುದಾಯಗಳು ಶೈಕ್ಷಣಿಕವಾಗಿ ಮುಂದುವರೆದು ಸಂವಿಧಾನಬದ್ಧವಾದ ಹಕ್ಕುಗಳನ್ನು ಪಡೆದು ಸಾಮಾಜಿಕವಾಗಿ, ರಾಜಕೀಯವಾಗಿ ಶಕ್ತಿ ಪಡೆಯಬೇಕು ಎಂದು ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

 

  ತಾಲ್ಲೂಕಿನ ಚಿಕ್ಕಸಣ್ಣೆ ಗೇಟ್ ನಲ್ಲಿರುವ ಎಸ್.ಎಸ್.ಬಿ.ಕನ್ವೆಂಕ್ಷನ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಗಾಣಿಗರ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲಿಕ್ಕಾಗಿ 1930 ರಲ್ಲಿ ಜಾತಿ ಸಮೀಕ್ಷೆ ಮಾಡಲಾಗಿತ್ತು. ಆ ನಂತರ ಬಂದಂತಹ ಯಾವ ಸರ್ಕಾರಗಳೂ ಜಾತಿವಾರು ಸಮೀಕ್ಷೆ ಮಾಡಿಲ್ಲ. ರಾಜ್ಯದಲ್ಲಿ 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಳಿದ ವರ್ಗದವರು, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಸೇರಿದಂತೆ ತಳಸಮುದಾಯಗಳ ಜೀವನಮಟ್ಟ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು, ಯಾವ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ಸಿಕ್ಕಿವೆ ಎಂದು ಪರಿಶೀಲಿಸಲು ಹಿಂದುಳಿದ ವರ್ಗಗಳ ಇಲಾಖೆಯ ಮುಖಾಂತರ ಜಾತಿ ಸಮೀಕ್ಷೆ ಮಾಡಿಸಿದ್ದೆ, ಆದರೆ, ನಂತರ ಬಂದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜಬೊಮ್ಮಾಯಿ ಇವರ್ಯಾರು ಈ ವರದಿಯನ್ನು ಬಹಿರಂಗ ಮಾಡಲಿಲ್ಲ. ಅವರು ಮಾಡುವುದೂ ಇಲ್ಲ.

 

   ಪುನಃ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿವಾರು ಜನಗಣತಿಯ ವರದಿಯನ್ನು ಬಹಿರಂಗ ಮಾಡಿ, ಯಾವ ಯಾವ ಸಮುದಾಯಗಳಿಗೆ ಶಕ್ತಿ ನೀಡಬೇಕೋ ನಾವು ನೀಡುತ್ತೇವೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕರುಡು ಸಮಿತಿ ಅಧ್ಯಕ್ಷರಾಗಿ ಉತ್ತಮ ಸಂವಿಧಾನ ಜಾರಿಗೆ ತಂದಿದ್ದರೆ, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಜಾತಿವಾರು ಮೀಸಲಾತಿ ನೀಡಿ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಿಸುವಂತಹ ಕೆಲಸ ಮಾಡಿದ್ದಾರೆ.. ಬಸವಣ್ಣ, ಬುದ್ಧ, ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು. ಆದರೆ, ಬಿಜೆಪಿಯವರು ಬಸವಣ್ಣನ ಹೆಸರೇಳಿಕೊಂಡು ಅವರ ತತ್ವ ಸಿದ್ಧಾಂತಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

 

  ಸಂವಿಧಾನ ಬಾಹಿರ ಮೀಸಲಾತಿ: ಮೀಸಲಾತಿ ನೀಡುವಾಗ ಆಯೋಗದ ನಿಯಮದಂತೆ ಶೇ 50 ಕ್ಕೆ ಮೀರದಂತೆ ಮೀಸಲಾತಿ ನೀಡಬೇಕು, ಆದರೆ, ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರಮೋದಿ ಅವರು ಮೀಸಲಾತಿ ಪ್ರಮಾಣವನ್ನು ಶೇ 60 ಕ್ಕೆ ಏರಿಕೆ ಮಾಡಿ, ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. 1994 ರಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಬೇಕು ಎಂದು ಹೊರಟಾಗ ಮಾಜಿ ರಾಜ್ಯಸಭಾ ಸದಸ್ಯರೊಬ್ಬರು ಕೋರ್ಟ್ ನಲ್ಲಿ ಆಕ್ಷೇಪಣೆ ಮಾಡಿದ್ದರು. ಇಂತಹ ಇತಿಹಾಸ ತಿಳಿದುಕೊಳ್ಳಬೇಕು. ಯಾರು ಬಡವರು, ಹಿಂದುಳಿದವರ ಪರ ಇದ್ದಾರೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

 

  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಶ್ರಮಜೀವಿಗಳಾಗಿ ಎಲ್ಲಾ ಸಮುದಾಯಗಳಿಗೆ ಪರೋಕ್ಷವಾಗಿ ನೆರವಾಗುತ್ತಿರುವ ಗಾಣಿಗ ಸಮುದಾಯಕ್ಕೆ ಶಕ್ತಿ ತುಂಬಿಸುವಂತಹ ಕೆಲಸ ಮಾಡಬೇಕಾಗಿದೆ. ಸಮುದಾಯದವರು ಒಗ್ಗಟ್ಟಿನಿಂದ ಕೂಡಿರಬೇಕು. ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಅವರ ಪಾತ್ರ ಮಹತ್ತರವಾಗಿದೆ. ರಾಜ್ಯದಲ್ಲಿ ಎಲ್ಲಾ ಹಿಂದುಳಿದ ಸಮುದಾಯಗಳ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಮುಂದಿನ ಚುನಾವಣೆಯ ಪ್ರಣಾಳಿಕೆಯಲ್ಲಿ ಎಲ್ಲಾ ಸಮುದಾಯಗಳ ಮೂಲ ಬೇಡಿಕೆಗಳನ್ನು ಸೇರಿಸಿಕೊಂಡು ಈಡೇರಿಸಲಿಕ್ಕಾಗಿ ಕಾರ್ಯಕ್ರಮಗಳು ರೂಪಿಸಲಾಗುತ್ತದೆ. ಎಲ್ಲಾ ಸಮುದಾಯಗಳು ಬೆಳೆಯಲಿಕ್ಕಾಗಿ ಅವಕಾಶ ಮಾಡಿಕೊಡುತ್ತೇವೆ ಎಂದರು.

 

  ಗಾಣಿಗ ಸಮುದಾಯದ ಮುಖಂಡ ವೇಣುಗೋಪಾಲ್ ಮಾತನಾಡಿ, ನಮ್ಮ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಯಾವುದೇ ಪಕ್ಷವಿರಲಿ ನಮಗೆ ನಮ್ಮ ಸಮುದಾಯದವರು ಅಭಿವೃದ್ಧಿಯತ್ತ ಸಾಗುವುದು ಮುಖ್ಯವಾಗಿದೆ. ಗಾಣಿಗ ಸಮುದಾಯಕ್ಕಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ಹೆಚ್ಚು ಅನುದಾನ ಕೊಡಬೇಕು ಎಂದರು

 

ಕಾಂಗ್ರೆಸ್ ಪಕ್ಷ ಎಲ್ಲರಿಗೂ ಅಧಿಕಾರ ಕೊಟ್ಟಿದೆ. ಬಿಜೆಪಿ, ಜೆಡಿಎಸ್ ನಲ್ಲಿ ಅದು ಸಾಧ್ಯವಿಲ್ಲ, ನಾಯಕತ್ವ, ರಾಜಕೀಯ ಪಾಲುಗಾರಿಕೆ, ಮೀಸಲಾತಿ ಕೊಟ್ಟಿದೆ. ಎಲ್ಲಾ ಸಮುದಾಯಗಳಿಗೆ ವೃತ್ತಿಯಾಧಾರಿತವಾಗಿ ಹಣ ಕೊಡಬೇಕು ಎಂದು ಹೋರಾಟ ಮಾಡಿದವರು ನಾವು, ಹಿಂದೆಯೂ ಮಾಡಿದ್ದೇವೆ. ಮುಂದೆಯೂ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

 

ಎಲ್ಲಾ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ ಶಕ್ತಿ ಕೊಡುವುದು ನಮ್ಮ ಕರ್ತವ್ಯ ಅದನ್ನು ನಾವು ಕೊಡ್ತೇವೆ. ನಾನು ಯಾರಿಗೂ ಭಯಪಡುವವನಲ್ಲ, ನನಗೆ ನಡುಕ ಬರುತ್ತೋ ಇಲ್ಲವೋ ಎಂದು ಕುಮಾರಣ್ಣನಿಗೆ ಗೊತ್ತಿದೆ. ಅಚ್ಚ ಕನ್ನಡ ಮಾತನಾಡ್ತಾರೆ, ನಾನು ಹುಚ್ಚಾಸ್ಪತ್ರೆಗೆ ಹೋಗಲಿಕ್ಕೆ ಸಿದ್ಧನಾಗಿದ್ದೇನೆ. ಈಶ್ವರಪ್ಪ ಬೆಡ್ ಸಿದ್ದಮಾಡಿಟ್ಟುಕೊಳ್ಳಲಿ, ಕಾಂಗ್ರೆಸ್ ಶಾಸಕರು 20 ಮಂದಿ ಬಿಜೆಪಿ ಸಂಪರ್ಕದಲ್ಲಿದ್ದರೆ ಅವರೇನು ಭಯ? ನಾವೆಲ್ಲರೂ ಈ ಬಗ್ಗೆ ಮಾತನಾಡಿಲ್ಲ ಎಂದರು.

 

    ಪುರಸಭೆ ಅಧ್ಯಕ್ಷೆ ರೇಖಾವೇಣುಗೋಪಾಲ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ದಕ್ಷಿಣ ಕನ್ನಡ ಜಿಲ್ಲೆ ಗಾಣಿಗ ಸಂಘದ ಗೌರವ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಎಂ.ಚಿನ್ನಪ್ಪ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಕೆ.ಸಿ.ಮಂಜುನಾಥ್, ಚಂದ್ರಶೇಖರ್, ವಿಜಯ್ ಕುಮಾರ್, ರಾಜಗೋಪಾಲ್, ಅಣ್ಣಮ್ಮ ತಾಯಿ ಸುರೇಶ್,ಆಂಜಿನಪ್ಪ, ಭಗವಾನ್, ಪಿ.ಎಂ.ರಘುನಾಥ್, ಕೃಷ್ಣಪ್ಪ, ವೆಂಕಟೇಶ್, ದೀಪಕ್, ಗೋಪಾಲ್, ಹಾಜರಿದ್ದರು.

 

ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!