ದೇವನಹಳ್ಳಿ ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ಸೌದಿ ಅರೇಬಿಯಾ ಮಾದರಿಯಲ್ಲಿ ಹಬ್ಬ ಆಚರಣೆ
ದೇವನಹಳ್ಳಿ: ಇಡೀ ವಿಶ್ವದಾದ್ಯಂತ ಇರುವುದು ಒಂದೇ ಚಂದ್ರ, ಸೌಧಿ ಅರೇಬಿಯಾದಲ್ಲಿ ಚಂದ್ರ ಕಾಣಿಸಿದಾಗ ದೇವನಹಳ್ಳಿಯಲ್ಲಿಯೂ ಸಹ ಹಬ್ಬವನ್ನು ಆಚರಿಸುತ್ತಾ ಬರಲಾಗಿದೆ ಎಂದು ಜಾಮೀಯ ಮಸೀದಿ (ಅಹಲೇ ಅಹದೀಸ್) ನ ಅಧ್ಯಕ್ಷ ಅಬ್ದುಲ್ ಖುದ್ದೂಸ್ ಪಾಷ ತಿಳಿಸಿದರು.
ಪಟ್ಟಣದ ಹಳೇ ಮಸೀದಿ ರಸ್ತೆಯಲ್ಲಿರುವ ಐತಿಹಾಸಿಕ ಜಾಮೀಯ ಮಸೀದಿ ಅಹಲೇ ಅಹದೀಸ್ ಮಸೀದಿಯಲ್ಲಿ ಬಕ್ರಿದ್ ಹಬ್ಬದ ಅಂಗವಾಗಿ ಸಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಅವರು ಮಾತನಾಡಿದರು. ವರ್ಷದಲ್ಲಿ ಒಂದು ಬಾರಿ ಹಬ್ಬ ಬರುತ್ತದೆ. ಮುಖ್ಯವಾಗಿ ಇಡೀ ವಿಶ್ವದಲ್ಲಿ ಒಂದೇ ಸಾರಿ ಹಜ್ ಆಗುತ್ತದೆ. ನೆನ್ನೆ ಹಜ್ ಆಗಿದ ಮಾರನೇಯ ದಿನ ನಮಾಝ್ (ಪ್ರಾರ್ಥನೆ) ಸಲ್ಲಿಸಿ ಅಲ್ಲಾಹನನ್ನು ಸಂತೋಷ ಪಡಿಸಲು ಕುರ್‌ಬಾನಿ(ಪ್ರಾಣಿಯನ್ನು ಬಲಿ) ನೀಡುವ ಸಂಪ್ರದಾಯವಿದೆ. ಇದಕ್ಕೆ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಸಾಕ್ಷಿಯಾಗಿದೆ. ಹಾಗೂ ಈ ಹಬ್ಬಕ್ಕೆ ತನ್ನದೇ ಆದ ಇತಿಹಾಸವೂ ಇದೆ. ತ್ಯಾಗ ಬಲಿದಾನದ ಹಬ್ಬ ಇದಾಗಿರುವುದರಿಂದ ಪ್ರತಿ ಮುಸಲ್ಮಾನ ಬಾಂಧವರು ಈ ಹಬ್ಬದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಬ್ಬದ ದಿನವನ್ನು ಸಂಭ್ರಮಿಸುತ್ತಾರೆ.
ಸರಕಾರ ಕೋವಿಡ್ ಹರಡುವ ಹಿನ್ನಲೆಯಲ್ಲಿ ಸೂಚಿಸಿರುವ ಮಾರ್ಗಸೂಚಿಗಳ ಪಾಲನೆಯನ್ನು ಮಾಡಲಾಗಿದೆ. ಮಸೀದಿಯಲ್ಲಿಯೇ ಬಕ್ರಿದ್ ಹಬ್ಬದ ನಮಾಜ್ ಅನ್ನು ನೆರವೇರಿಸಲಾಗಿದೆ. ಕೋವಿಡ್ ಹರಡದಂತೆ ಮುನ್ನೆಚ್ಚರಿಕೆಯಾಗಿ ಬರುವ ಅಲ್ಲಾಹುವಿನ ಭಕ್ತರಿಗೆ ಮಸೀದಿ ಆವರಣದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್, ಸೋಪು ನೀರಿನಿಂದ ಕೈತೊಳೆದು ಮಸೀದಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರ ಮಧ್ಯೆ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕವಾಗಿ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಮಾಜ್ ಮುಗಿದ ನಂತರ ಗುಂಪು ಸೇರದೆ ಮನೆಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಶಾಂತಿಯುತವಾಗಿ ಹಬ್ಬದ ನಮಾಜ್ ಅನ್ನು ನೆರವೇರಿಸಿದ್ದು, ಪ್ರತಿಯೊಬ್ಬರಿಗೂ ಕರ್ಜೂರದ ಹಣ್ಣನ್ನು ನೀಡಿ ಸಂಭ್ರಮಿಸಲಾಯಿತು. ಯಾವುದೇ ರೀತಿಯ ಅಹಿತಕರ ಘಟನೆಯಾಗದಂತೆ ಶಿಸ್ತಿನಿಂದ ಬಂದು ಪ್ರತಿ ಮುಸ್ಲಿಂ ಸ್ನೇಹಿತರು ಅಲ್ಲಾಹುವಿಗೆ ಶರಣಾಗಿದ್ದಾರೆ ಎಂದರು.
ಜಾಮೀಯ ಮಸೀದಿಯ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ ಮಾತನಾಡಿ, ಹಬ್ಬವನ್ನು ಪ್ರತಿ ಬಾರಿ ಈದ್ಗಾ ಮೈದಾನದಲ್ಲಿ ನೆರವೇರಿಸಲಾಗುತ್ತಿತ್ತು. ಈ ಬಾರಿ ಕೋವಿಡ್ ಎಂಬ ಮಹಾಮಾರಿಯಿಂದಾಗಿ ಹಬ್ಬವನ್ನು ಸರಳವಾಗಿ ಸರಕಾರದ ಮಾರ್ಗಸೂಚಿಯನ್ನು ಅನುಸರಿಸಿ ಮಸೀದಿಗಳಲ್ಲಿಯೇ ಪಾಳಿಯಾದಾರದಲ್ಲಿ ಮಾಡಲಾಗಿದೆ. ಸೌಧಿ ಅರೇಬಿಯಾದಲ್ಲಿ ಚಂದ್ರ ಕಂಡರೆ, ಇಲ್ಲಿಯೂ ಸಹ ಹಬ್ಬವನ್ನು ಆಚರಿಸುವ ಪರಿಪಾಠವಿದೆ. ಭಾರತದ ಹಲವಾರು ಕಡೆಗಳಲ್ಲಿ ಇಂದು ಹಬ್ಬವನ್ನು ಆಚರಿಸುತ್ತಾರೆ. ನಾಳೆಯು ಸಹ ಹಬ್ಬವನ್ನು ಕೆಲವರು ಆಚರಿಸುತ್ತಾರೆ ಎಂದರು.
ಈ ವೇಳೆಯಲ್ಲಿ ಮಸೀದಿ ಪಂಡಿತ ಅಬ್ದುಲ್ ಜಬ್ಬಾರ್, ಯುವ ಪಂಡಿತ ಮೊಹಮ್ಮದ್ ಅರ್ಶದ್, ಪಿಎಚ್‌ಡಿ ಪದವೀಧರ ಡಾ.ಶಫಿಕ್ ಅಹಮದ್, ಹಿರಿಯ ಮುಖಂಡರಾದ ವಾಜೀದ್, ಬಿದರಹಳ್ಳಿ ಮೊಹಮ್ಮದ್ ಅಲಿ, ಜಾವೀದ್‌ಖಾನ್, ಗೌಸ್, ಗೌಸ್‌ಪೀರ್, ಯುವ ಮುಖಂಡರಾದ ಹೈದರ್‌ಸಾಬ್, ಶಂಷೀರ್ ಅಹಮದ್, ಪಾಚಲ್‌ಸಾಬ್, ಶಬ್ಬೀರ್, ಅಕ್ಬರ್, ರಫಿ, ಜಬೀವುಲ್ಲಾ, ಸೈಫುಲ್ಲಾ, ಶಫೀ, ಮುಸ್ಲಿಂ ಸಮುದಾಯದ ಮುಖಂಡರು, ಮಹಿಳೆಯರು ಇದ್ದರು.
ಗುರುಮೂರ್ತಿ ಬೂದಿಗೆರೆ
8861100990