ನಾಳೆ ಭಾರತ್ ಬಂದ್; ಏನಿರುತ್ತೆ..? ಏನಿರಲ್ಲಾ..?
ಬೆಂಗಳೂರು: ಸೋಮವಾರ ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ, ಕರ್ನಾಟಕವೂ ಬಹುತೇಕ ಬಂದ್, ಆಗುವ ನಿರೀಕ್ಷೆ ಇದೆ. ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದು, ಇನ್ನೂ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತಪರ ಸಂಘಟನೆಗಳು ಮತ್ತೆ ಸಿಡಿದೆದ್ದಿದ್ದು, ನಾಳೆ ಸೆ.27ರಂದು ಭಾರತ್ ಬಂದ್‌ಗೆ ಕರೆ ನೀಡಿವೆ. ಹೀಗಾಗಿ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬಂದ್ ಇದ್ರೂ ಕರ್ನಾಟಕದಲ್ಲಿ ಎಲ್ಲವೂ ಯಥಾಸ್ಥಿತಿ ಇರುವ ಸಾಧ್ಯತೆ ಇದೆ. ಬಹುತೇಕ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ನೀಡಲಿವೆ. ನೈತಿಕ ಬೆಂಬಲ ನೀಡುತ್ತೇವೆ, ಆದ್ರೆ ಅಂಗಡಿ ಮುಂಗಟ್ಟು ಬಂದ್ ಮಾಡಲ್ಲ ಎಂದು ಹೇಳುತ್ತಿದ್ದಾರೆ.
ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ನೀಡಲಿವೆ. ಕರ್ನಾಟಕ ಬಂದ್‌ಗೆ ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ ಸೇರಿ ಕೆಲ ಸಂಘಟನೆಗಳು ಬೆಂಬಲ ನೀಡಲಿವೆ. ರಾಜ್ಯದಲ್ಲಿ ರೈತ ಸಂಘಟನೆಗಳು, ಕಾರ್ಮಿಕ, ದಲಿತ, ಕನ್ನಡಪರ ಮತ್ತು ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡಿವೆ. ವರ್ತಕರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ವರ್ತಕರ ಸಂಘಗಳು ಕೂಡ ಕೈ ಜೋಡಿಸಲಿವೆ.
ಬಂದ್‌ಗೆ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ನೈತಿಕ ಬೆಂಬಲ ಸೂಚಿಸಿವೆ. ಹೊಟೇಲ್ ಉದ್ಯಮ ಬೆಂಬಲ ಸೂಚಿಸಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ, ಮೆಟ್ರೋ ಸಂಚಾರ ಇರುವ ಸಾಧ್ಯತೆಯಿದೆ.
ವರದಿ-ಸುಚಿತ್ರಾ ನಾಯ್ಕ ಹೊನ್ನಾವರ