ಪಕ್ಷೇತರ ಅಭ್ಯರ್ಥಿ ದಾಸಪ್ಪನಿಂದ ವಿಶೇಷವಾಗಿ ಮತಯಾಚನೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣೆ ದಿನೇ ದಿನೇ ಕಾವೇರುತ್ತಿದ್ದು ಎಲ್ಲಾ ಪಕ್ಷಗಳ ನಾಯಕರುಗಳು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಈಗಾಗಲೇ ಮತಯಾಚನೆ ನಡೆಸಿದ್ದಾರೆ. ಬಿಜೆಪಿ ಪಕ್ಷದಿಂದ ಹಾಲಿ ಸಚಿವರಾದ ಮಾಧುಸ್ವಾಮಿ, ಅವರ ಪುತ್ರ ಅಭಿಜ್ಞಾನ ಮಾಧುಸ್ವಾಮಿ, ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವರಾದ ಜಯಚಂದ್ರ ಹಾಗೂ ಹೆಚ್ .ಎಂ.ರೇವಣ್ಣ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಕೆ. ಎನ್.ರಾಜಣ್ಣ,ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಶಫಿ ಅಹ್ಮದ್, ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕರಾದ ಸಿ.ಬಿ.ಸುರೇಶ್ ಬಾಬು, ಬಂಡಾಯ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳ ಪರ ರಾಜ್ಯ ಜೈವಿಕ ಇಂಧನ ನಿಗಮ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಆಗಿರುವ ಕೆ.ಎಸ್.ಕಿರಣ್ ಕುಮಾರ್ ಕೂಡ ಎಲ್ಲಾ ವಾರ್ಡ್ ಗಳಿಗೂ ಭೇಟಿ ನೀಡುವ ಮೂಲಕ ತಮ್ಮ ಪರವಾಗಿರುವ ಅಭ್ಯರ್ಥಿಗಳ ಚುನಾವಣಾ ಪ್ರಚಾರ ನಡೆಸುವುದರ ಮೂಲಕ ಪಟ್ಟಣ ಪಂಚಾಯಿತಿ ಚುನಾವಣೆ ಕಳೆಕಟ್ಟುವಂತೆ ಮಾಡಿದ್ದಾರೆ.
ಇದರ ನಡುವೆಯೇ ರಾಜ್ಯ ರೈತ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಬೆಂಬಲಿತ ಅಭ್ಯರ್ಥಿಯಾಗಿ 7ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಯಂತ್ (ದಾಸಪ್ಪ) ವಿಶೇಷವಾಗಿ ಮತಯಾಚನೆ ಮಾಡುವ ಮೂಲಕ ಗಮನ ಸೆಳೆದರು.
ದಾಸಪ್ಪನ ವೇಷಧಾರಿಯಾಗಿ ವಾರ್ಡಿನ ಪ್ರತಿಮನೆಯ ಮುಂದು ಶಂಖು ಊದುತ್ತಾ, ಜಾಗಟೆ ಬಾರಿಸುತ್ತಾ ತಮ್ಮಪರ ಮತಯಾಚನೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು.