ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಬ್ಯಾಲಹಳ್ಳಿಯಲ್ಲಿ ಸವರ್ಣೀಯರ ವಿರೋಧದ ನಡುವೆಯೇ ದಲಿತರು ದೇವಾಲಯ ಪ್ರವೇಶಿಸುವ ಕಾರ್ಯಕ್ರಮ ನಡೆಯಿತು.
ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ತೊಳಸಮ್ಮ ದೇವಾಲಯವಿದ್ದು, ಈವರೆಗೆ ದಲಿತರ ಪ್ರವೇಶವಾಗಿರಲಿಲ್ಲ. ಅಲ್ಲದೆ ದೇವಾಲಯದ ಗೊಡೆಗೆ ಮುಜರಾಯಿ ಇಲಾಖೆಯಿಂದ ಅಂಟಿಸಿದ್ದ ಸೂಚನಾ ಫಲಕ ಅಳಿಸಿ ಹಾಕುವ ಪ್ರಯತ್ನವನ್ನು ಗ್ರಾಮದ ಕೇಲವು ಕಿಡಿಗೇಡಿಗಳು ಮಾಡಿದ್ದರು.
“ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮದ ಬೇಧವಿಲ್ಲದೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಲಾಗಿದೆ” ಎಂದು ಹಾಕಲಾಗಿದ್ದ ಸೂಚನಾ ಫಲಕದಲ್ಲಿ ‘ಜಾತಿ, ಜನಾಂಗ’ ಇತ್ಯಾದಿ ಪದಗಳನ್ನು ಅಳಿಸಿ ಹಾಕಲಾಗಿತ್ತು.
ಕಂದಾಯ ಇಲಾಖೆ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿರುವ ಕಂದಾಯ ನಿರೀಕ್ಷಕ ನಾಗಭೂಷಣ್ ಗ್ರಾಮ ಲೆಕ್ಕಾಧಿಕಾರಿ ಶಶಿ ಕುಮಾರ್ ಗ್ರಾಮದ ದಲಿತರು ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಆದರೆ ದಲಿತರು ದೇವಾಲಯ ಪ್ರವೇಶಿಸುವುದನ್ನು ತಡೆಯಲು ಸವರ್ಣೀಯ ಯುವಕರು ಯತ್ನಿಸಿದರು. ಇದರಿಂದ ಹೆದರಿದ ದಲಿತರು, ದೇವಾಲಯ ಪ್ರವೇಶಿಸಲು ಹಿಂದೇಟು ಹಾಕಿದರು. ಆದರೆ ದಲಿತ ಮುಖಂಡ ಬಿ.ಸಿ.ರೇಣುಕಪ್ಪ ಒಬ್ಬರೇ ದೇವಾಲಯ ಪ್ರವೇಶಿಸುವ ಧೈರ್ಯ ತೋರಿದರು.
ದೇವಾಲಯದ ಒಳಗೆ ಎಲ್ಲಾ ಸಮುದಾಯದ ಜನರಿಗೆ ಮುಕ್ತ ಪ್ರವೇಶವಿದೆ ಎಂಬ ಸೂಚನಾ ಫಲಕ ಬರೆಸುತ್ತೇವೆ ಎಂದು ಕಂದಾಯ ಅಧಿಕಾರಿ ಹೇಳಿದಾಗ. “ಸರ್, ಬೋರ್ಡ್ ಬರೆಸುವುದಷ್ಟೇ ಅಲ್ಲ, ದೇವಾಲಯದೊಳಗೆ ಪ್ರವೇಶವನ್ನೂ ಕೊಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಬ್ಯಾಲಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಚಿಲ್ಲರೆ ನೇಪದಲ್ಲಿ ದಲಿತರಿಗೆ ಹಾಲು ನೀಡುತ್ತಿಲ್ಲ, ಹಾಲು ನೀಡಲು ನಿರಾಕರಣೆ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ದಲಿತರಿಗೆ ಹಾಲನ್ನು ಕೊಡವ ವ್ಯವಸ್ಥೆ ಮಾಡಿ” ಎಂದು ಗ್ರಾಮದ ದಲಿತ ಮಖಂರಾದ ಸಿದ್ದಲಿಂಗಯ್ಯ ಅಧಿಕಾರಿಗೆ ಆಗ್ರಹಿಸಿದ್ದಾರೆ.
ಕಂದಾಯ ನಿರೀಕ್ಷಕರು ಹಾಲಿನ ಡೇರಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. “ಮಂಗಳವಾರದಿಂದ ದಲಿತರು ಹಾಲು ಖರೀದಿಸಲು ಅವಕಾಶ ನೀಡಿರುವುದು ಕೊಂಚ ಸಮಾಧಾನ ತಂದಿದೆ” ಎಂದು ದಲಿತರು ತಿಳಿಸಿದ್ದಾರೆ.